ವಿಜಯನಗರ: ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ವಾಲ್ಮೀಕಿ ವೃತ್ತದ ಬಳಿಯ ಬಿದಿರು ಮಳಿಗೆಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ.
ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿದ್ದು, ಮಳಿಗೆಯಲ್ಲಿದ್ದ ಬಿದಿರುಗಳು ಧಗಧಗನೆ ಹೊತ್ತಿ ಉರಿದಿವೆ.
ಬೆಂಕಿಯ ಕೆನ್ನಾಲಿಗೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ಬಿದಿರುಗಳು ಸುಟ್ಟು ಕರಕಲಾಗಿವೆ. ಬೆಂಕಿ ಬಾನೆತ್ತರಕ್ಕೆ ಚಾಚಿಕೊಂಡು ಉರಿಯುತ್ತಿದ್ದ ದೃಶ್ಯ ಕಂಡು ಸ್ಥಳೀಯರು ಆತಂಕಕ್ಕೊಳಗಾದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದರು.
ಪೊಲೀಸರು ಸ್ಥಳದಲ್ಲಿದ್ದ ಜನರನ್ನು ಚದುರಿಸಿ, ಪರಿಸ್ಥಿತಿ ನಿಯಂತ್ರಿಸಲು ಮುಂದಾದರು. ಸ್ಥಳೀಯರೂ ಬೆಂಕಿ ನಂದಿಸುವ ಕಾರ್ಯಕ್ಕೆ ಕೈಜೋಡಿಸಿದರು. ಹೊಸಪೇಟೆ ಡಿವೈಎಸ್ಪಿ ಮುರಳೀಧರ ಹಾಗೂ ಪಟ್ಟಣ ಪೊಲೀಸ್ ಠಾಣೆಯ ಪಿಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಮಯಕ್ಕೆ ಸರಿಯಾಗಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆದ ಹಿನ್ನೆಲೆಯಲ್ಲಿ ಭಾರೀ ಅನಾಹುತ ತಪ್ಪಿದೆ. ಈ ಘಟನೆ ಹೊಸಪೇಟೆ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

