HomePolitics Newsರೈಲ್ವೆ ಚತುಷ್ಪಥ ಯೋಜನೆ ವಿವಾದ: ಕರ್ನಾಟಕಕ್ಕೆ ತಾರತಮ್ಯ ಆರೋಪ ತಳ್ಳಿಹಾಕಿದ ಸೋಮಣ್ಣ

ರೈಲ್ವೆ ಚತುಷ್ಪಥ ಯೋಜನೆ ವಿವಾದ: ಕರ್ನಾಟಕಕ್ಕೆ ತಾರತಮ್ಯ ಆರೋಪ ತಳ್ಳಿಹಾಕಿದ ಸೋಮಣ್ಣ

For Dai;y Updates Join Our whatsapp Group

ನವದೆಹಲಿ: ಕರ್ನಾಟಕಕ್ಕೆ ರೈಲ್ವೆ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿಲ್ಲ ಎಂಬ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಅವರ ಆರೋಪಕ್ಕೆ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ತಿರುಗೇಟು ನೀಡಿದ್ದಾರೆ.

ರೈಲು ಮಾರ್ಗಗಳ ಚತುಷ್ಪಥೀಕರಣವನ್ನು ರಾಜ್ಯವಾರು ಅಥವಾ ರಾಜಕೀಯ ಕಾರಣಗಳ ಆಧಾರದ ಮೇಲೆ ನಿರ್ಧರಿಸುವುದಿಲ್ಲ. ಬದಲಾಗಿ, ರೈಲು ಸಂಚಾರದ ಒತ್ತಡ ಮತ್ತು ತಾಂತ್ರಿಕ ಮಾನದಂಡಗಳನ್ನು ಪರಿಗಣಿಸಿ ಯೋಜನೆ ರೂಪಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸೋಮಣ್ಣ, ದೇಶದಲ್ಲಿ ಏಳು ಪ್ರಮುಖ ಹೈ ಡೆನ್ಸಿಟಿ ರೈಲ್ವೆ ಮಾರ್ಗಗಳನ್ನು ಗುರುತಿಸಲಾಗಿದೆ. ಇವುಗಳ ಒಟ್ಟು ಉದ್ದ ಸುಮಾರು 11 ಸಾವಿರ ಕಿಲೋಮೀಟರ್ ಆಗಿದ್ದು, ದೇಶದ ರೈಲ್ವೆ ಜಾಲದ ಶೇ.16ರಷ್ಟಿದ್ದರೂ, ಒಟ್ಟು ರೈಲು ಸಂಚಾರದ ಶೇ.41ರಷ್ಟು ಹೊರೆ ನಿರ್ವಹಿಸುತ್ತವೆ ಎಂದು ವಿವರಿಸಿದರು.

ದೆಹಲಿ–ಹೌರಾ, ಹೌರಾ–ಚೆನ್ನೈ, ಚೆನ್ನೈ–ಮುಂಬೈ, ಮುಂಬೈ–ದೆಹಲಿ, ದೆಹಲಿ–ಚೆನ್ನೈ, ಮುಂಬೈ–ಹೌರಾ ಹಾಗೂ ದೆಹಲಿ–ಗುವಾಹಟಿ ಮಾರ್ಗಗಳು ಈ ಹೈ ಡೆನ್ಸಿಟಿ ನೆಟ್‌ವರ್ಕ್ ವ್ಯಾಪ್ತಿಗೆ ಬರುತ್ತವೆ ಎಂದು ತಿಳಿಸಿದರು.

ಕರ್ನಾಟಕಕ್ಕೂ ಹೈ ಡೆನ್ಸಿಟಿ ಮಾರ್ಗದ ಪ್ರಯೋಜನ:

ಕರ್ನಾಟಕಕ್ಕೆ ಹೈ ಡೆನ್ಸಿಟಿ ನೆಟ್‌ವರ್ಕ್ ಅಡಿಯಲ್ಲಿ ರೈಲು ಮಾರ್ಗಗಳ ಚತುಷ್ಪಥೀಕರಣ ಯೋಜನೆ ನೀಡಿಲ್ಲ ಎಂಬ ಆರೋಪವನ್ನು ಸೋಮಣ್ಣ ತಳ್ಳಿಹಾಕಿದ್ದಾರೆ. ಚೆನ್ನೈ–ಮುಂಬೈ ಹೈ ಡೆನ್ಸಿಟಿ ಮಾರ್ಗವು ಕರ್ನಾಟಕದ ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ ಎಂದು ಹೇಳಿದ್ದಾರೆ.

ವಾಡಿ–ರಾಯಚೂರು ವಿಭಾಗದಲ್ಲಿ ವಿದ್ಯುತ್ ಟ್ರ್ಯಾಕ್ಷನ್ ವ್ಯವಸ್ಥೆಯನ್ನು 1×25 ಕೆ.ವಿ.ಯಿಂದ 2×25 ಕೆ.ವಿ.ಗೆ ಮೇಲ್ದರ್ಜೆಗೇರಿಸಲು 220 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಯಿಂದ ಕರ್ನಾಟಕಕ್ಕೂ ಪ್ರಯೋಜನವಾಗಲಿದೆ ಎಂದು ತಿಳಿಸಿದ್ದಾರೆ.

ಹೈ ಡೆನ್ಸಿಟಿ ಮಾರ್ಗಗಳನ್ನು ಆಯ್ಕೆ ಮಾಡುವಾಗ ವಾರ್ಷಿಕ ಸರಕು ಸಾಗಣೆ ಪ್ರಮಾಣ ಸೇರಿದಂತೆ ಹಲವು ತಾಂತ್ರಿಕ ಅಂಶಗಳನ್ನು ಪರಿಗಣಿಸಲಾಗುತ್ತದೆ. ಹೀಗಾಗಿ ಇದನ್ನು ರಾಜ್ಯದ ವಿರುದ್ಧದ ತಾರತಮ್ಯ ಎಂದು ಬಿಂಬಿಸುವುದು ಸರಿಯಲ್ಲ ಎಂದು ಸೋಮಣ್ಣ ಹೇಳಿದ್ದಾರೆ.

ಕರ್ನಾಟಕದ ರೈಲ್ವೆ ಅಭಿವೃದ್ಧಿಗೆ ₹52 ಸಾವಿರ ಕೋಟಿಗೂ ಅಧಿಕ ಮಂಜೂರಾತಿ:

ಮೋದಿ ಸರ್ಕಾರದ ಅವಧಿಯಲ್ಲಿ ಕರ್ನಾಟಕದ ರೈಲ್ವೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ವಾರ್ಷಿಕ ಸರಾಸರಿ ಸುಮಾರು 830ರಿಂದ 882 ಕೋಟಿ ರೂಪಾಯಿ ಅನುದಾನ ದೊರೆಯುತ್ತಿತ್ತು. ಆದರೆ ಮೋದಿ ಸರ್ಕಾರದ ಅವಧಿಯಲ್ಲಿ ವಾರ್ಷಿಕ ಅನುದಾನ 7,500 ಕೋಟಿ ರೂಪಾಯಿಗೂ ಅಧಿಕವಾಗಿದೆ ಎಂದು ಹೇಳಿದ್ದಾರೆ.

2026ರಲ್ಲಿ ಕರ್ನಾಟಕದ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ 7,748 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ. ಕಳೆದ 12 ವರ್ಷಗಳಲ್ಲಿ ರಾಜ್ಯದಲ್ಲಿ 52 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ರೈಲ್ವೆ ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದ್ದು, ಅಷ್ಟೇ ಮೌಲ್ಯದ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ವಿವರಿಸಿದ್ದಾರೆ.

ಕಲ್ಯಾಣ ಕರ್ನಾಟಕಕ್ಕೆ ₹12,900 ಕೋಟಿ ಮೊತ್ತದ ಯೋಜನೆಗಳು:

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 12,900 ಕೋಟಿ ರೂಪಾಯಿ ಮೌಲ್ಯದ ರೈಲ್ವೆ ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದೆ.

ಬಳ್ಳಾರಿ–ಚಿಕ್ಕಜಾಜೂರು ರೈಲು ಮಾರ್ಗದ ದ್ವಿಪಥೀಕರಣಕ್ಕೆ 3,400 ಕೋಟಿ ರೂಪಾಯಿ ಮಂಜೂರಾಗಿದ್ದು, ಹಗರಿಬೊಮ್ಮನಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ರಸ್ತೆ ಮೇಲ್ಸೇತುವೆ ಹಾಗೂ ಇತರ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಬಳ್ಳಾರಿ–ಹೊಸಪೇಟೆ ಮಾರ್ಗದಲ್ಲಿ ಮೂರನೇ ಮತ್ತು ನಾಲ್ಕನೇ ರೈಲು ಮಾರ್ಗ ನಿರ್ಮಾಣಕ್ಕೆ 2,380 ಕೋಟಿ ರೂಪಾಯಿ ವೆಚ್ಚದ ಯೋಜನೆ ರೂಪಿಸಲಾಗಿದೆ. ತುಮಕೂರು–ಬೆಂಗಳೂರು ಮೂರನೇ ಮತ್ತು ನಾಲ್ಕನೇ ರೈಲು ಮಾರ್ಗದ ವಿಸ್ತರಣೆಗೆ ಸಂಬಂಧಿಸಿದ ವಿವರವಾದ ಯೋಜನಾ ವರದಿ (ಡಿಪಿಆರ್) ಪೂರ್ಣಗೊಂಡಿದ್ದು, ಮುಂದಿನ ಹಂತದ ಕ್ರಮಕ್ಕೆ ಸಿದ್ಧತೆ ನಡೆದಿದೆ ಎಂದು ತಿಳಿಸಿದ್ದಾರೆ.

ಇದಲ್ಲದೆ, ತುಮಕೂರು–ವಸಂತನರಸಾಪುರದಲ್ಲಿ ಮಲ್ಟಿ ಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್ ಅಭಿವೃದ್ಧಿಪಡಿಸುವ ಯೋಜನೆಯೂ ಇದೆ ಎಂದು ಸೋಮಣ್ಣ ಹೇಳಿದ್ದಾರೆ.

ಭೂಸ್ವಾಧೀನ ವಿಳಂಬಕ್ಕೆ ರಾಜ್ಯ ಸರ್ಕಾರವೇ ಕಾರಣ: ಸೋಮಣ್ಣ:

ರೈಲ್ವೆ ಯೋಜನೆಗಳ ಅನುಷ್ಠಾನದಲ್ಲಿ ಭೂಸ್ವಾಧೀನ ವಿಳಂಬವಾಗುತ್ತಿರುವುದಕ್ಕೆ ರಾಜ್ಯ ಸರ್ಕಾರವೇ ಕಾರಣ ಎಂದು ಸೋಮಣ್ಣ ಆರೋಪಿಸಿದ್ದಾರೆ. ಮೂರು ಸಾವಿರ ಎಕರೆಗೂ ಅಧಿಕ ಭೂಮಿಯನ್ನು ಇನ್ನೂ ರೈಲ್ವೆ ಇಲಾಖೆಗೆ ಹಸ್ತಾಂತರಿಸಬೇಕಿದೆ ಎಂದು ಹೇಳಿದ್ದಾರೆ.

ಬೆಳಗಾವಿ–ಧಾರವಾಡ ಹೊಸ ರೈಲು ಮಾರ್ಗಕ್ಕೆ 2019–20ರಲ್ಲೇ ಅನುಮೋದನೆ ದೊರೆತಿದ್ದರೂ ಭೂಮಿ ಹಸ್ತಾಂತರದಲ್ಲಿ ವಿಳಂಬವಾಗಿದೆ ಎಂದು ತಿಳಿಸಿದ್ದಾರೆ.

ಹೆಜ್ಜಾಲ–ಚಾಮರಾಜನಗರ 141 ಕಿಲೋಮೀಟರ್ ರೈಲು ಯೋಜನೆಯನ್ನು ಪುನಶ್ಚೇತನಗೊಳಿಸುವ ಪ್ರಯತ್ನ ನಡೆದಿತ್ತು. ಆದರೆ, 2024ರ ಡಿಸೆಂಬರ್‌ನಲ್ಲಿ ರಾಜ್ಯ ಹಣಕಾಸು ಇಲಾಖೆಯಿಂದ ಯೋಜನೆಗೆ ಒಪ್ಪಿಗೆ ನೀಡಲು ಸಾಧ್ಯವಿಲ್ಲ ಎಂಬ ಪತ್ರ ಬಂದಿತ್ತು ಎಂದು ಸೋಮಣ್ಣ ಆರೋಪಿಸಿದ್ದಾರೆ.

ಮಂಗಳೂರು ರೈಲ್ವೆ ವ್ಯಾಪ್ತಿಯಲ್ಲಿ ಬದಲಾವಣೆ:

ಮಂಗಳೂರು ಪ್ರದೇಶವನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ವ್ಯಾಪ್ತಿಗೆ ತರಲಾಗಿದೆ.

ಈ ಬದಲಾವಣೆಯಿಂದ ಮಂಗಳೂರು ರೈಲ್ವೆ ಪ್ರದೇಶದ ಸುಮಾರು 55 ಕಿಲೋಮೀಟರ್ ವ್ಯಾಪ್ತಿ ಮೈಸೂರು ವಿಭಾಗದ ಅಡಿಗೆ ಬರಲಿದೆ. ಇದರಿಂದ ಮೈಸೂರು ವಿಭಾಗಕ್ಕೆ ವಾರ್ಷಿಕ 600ರಿಂದ 700 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ದೊರೆಯುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

ಪಡೀಲ್ ಬದಲಿಗೆ ಉಳ್ಳಾಲವು ಮೈಸೂರು–ಪಾಲಕ್ಕಾಡ್ ವಿಭಾಗಗಳ ನಡುವಿನ ಹೊಸ ಇಂಟರ್‌ಚೇಂಜ್ ಆಗಲಿದೆ ಎಂದು ತಿಳಿಸಿದ ಸೋಮಣ್ಣ, ಈ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಮೌನವಾಗಿದ್ದಾರೆ ಎಂದು ಟೀಕಿಸಿದ್ದಾರೆ. ಕೇರಳದ ಲಾಬಿಗೆ ಮಣಿದು ನಾಯಕರು ಮಾತನಾಡುತ್ತಿಲ್ಲ ಎಂಬ ಆರೋಪವನ್ನೂ ಮಾಡಿದ್ದಾರೆ.

ಒಟ್ಟಾರೆ, ಕರ್ನಾಟಕಕ್ಕೆ ರೈಲ್ವೆ ಕ್ಷೇತ್ರದಲ್ಲಿ ಅನ್ಯಾಯವಾಗುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿರುವ ಸೋಮಣ್ಣ, ರಾಜ್ಯದಲ್ಲಿ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img