ಬಾಲಿವುಡ್‌ನ ಖ್ಯಾತ ನಟಿ ಶೆಫಾಲಿ ಶಾ ಮದುವೆ, ಸಂಬಂಧಗಳು ಹಾಗೂ ಪೋಷಕತ್ವದ ಕುರಿತು ನೀಡಿರುವ ನೇರ ಹೇಳಿಕೆಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿವೆ.
ಲಿಲ್ಲಿ ಸಿಂಗ್ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಶೆಫಾಲಿ, ಭಾವನಾತ್ಮಕವಾಗಿ ಪ್ರಬುದ್ಧರಾಗುವ ಮುನ್ನ ಯುವಕರು ಮದುವೆಯಂತಹ ಜೀವನದ ನಿರ್ಣಾಯಕ ಹೆಜ್ಜೆ ಇಡಬಾರದು ಎಂದು ಹೇಳಿದ್ದಾರೆ.
‘ಚಿಕ್ಕ ವಯಸ್ಸಿನಲ್ಲಿ ನಿಮಗೆ ನಿಮ್ಮ ಬಗ್ಗೆ ಸರಿಯಾದ ಅರಿವು ಇರುವುದಿಲ್ಲ. ಜೀವನದಲ್ಲಿ ಏನು ಬೇಕು, ಯಾವ ರೀತಿಯ ಸಂಬಂಧ ಬೇಕು ಎಂಬುದನ್ನು ತಿಳಿದುಕೊಳ್ಳುವ ಮುನ್ನ ಮದುವೆಯಾಗುವುದು ಸರಿಯಲ್ಲ. ಮದುವೆ ಎಂಬ ವ್ಯವಸ್ಥೆಯನ್ನು ನಂಬದಿದ್ದರೆ ಅದರಲ್ಲಿ ಕಾಲಿಡಬೇಡಿ’ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ಇದೇ ವೇಳೆ, ‘ನನ್ನ ಮಾತಿಗೆ ಟ್ರೋಲ್ ಆಗಬಹುದು. ಆದರೂ ಹೇಳುತ್ತೇನೆ, ಮಕ್ಕಳನ್ನು ಮಾಡಿಕೊಳ್ಳುವುದಕ್ಕಿಂತ ನಾಯಿಗಳನ್ನು ಸಾಕಿ. ನಾಯಿಗಳು ಮಾತ್ರವೇ ಯಾವುದೇ ಷರತ್ತಿಲ್ಲದ ಪ್ರೀತಿ ಕೊಡುತ್ತವೆ’ ಎಂದು ಶೆಫಾಲಿ ಹೇಳಿಕೆ ನೀಡಿದ್ದಾರೆ.
ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಂಬಂಧಗಳು ಮತ್ತು ಪೋಷಕತ್ವದ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ.
ಶೆಫಾಲಿ ಶಾ ತಮ್ಮ ವೈಯಕ್ತಿಕ ಜೀವನದಲ್ಲೂ ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದಾರೆ. ಮೊದಲ ಪತಿ ಹರ್ಷ್ ಛಾಯಾ ಅವರಿಂದ ದೂರಾದ ಬಳಿಕ, 2000ರಲ್ಲಿ ನಿರ್ಮಾಪಕ ವಿಪುಲ್ ಅಮೃತ್ಲಾಲ್ ಶಾ ಅವರನ್ನು ವಿವಾಹವಾಗಿದ್ದರು.



