HomeKarnataka News200ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರ ಪರಿಸ್ಥಿತಿ, ಕೇಂದ್ರದ ನಿಯಮಾನುಸಾರ ಘೋಷಣೆ: ಸಿಎಂ ಡಿ ಕೆ ಶಿವಕುಮಾರ್

200ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರ ಪರಿಸ್ಥಿತಿ, ಕೇಂದ್ರದ ನಿಯಮಾನುಸಾರ ಘೋಷಣೆ: ಸಿಎಂ ಡಿ ಕೆ ಶಿವಕುಮಾರ್

For Dai;y Updates Join Our whatsapp Group

ಕನಕಪುರ: “ಈ ಬಾರಿ ಭೀಕರ ಬರ ಪರಿಸ್ಥಿತಿ ಎದುರಾಗಿದ್ದು, 200ಕ್ಕೂ ಹೆಚ್ಚು ತಾಲೂಕುಗಳು ಬರ ಪರಿಸ್ಥಿತಿಗೆ ಸಿಲುಕಿವೆ. ಕೇಂದ್ರದ ನಿಯಮಾನುಸಾರ ಬರ ಪೀಡಿತ ತಾಲೂಕುಗಳನ್ನು ಘೋಷಣೆ ಮಾಡಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ಕನಕಪುರದ ನಿವಾಸದಲ್ಲಿ ಶಿವಕುಮಾರ್ ಅವರು ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಕರ್ನಾಟಕ ರಾಜ್ಯದ ಜನತೆಗೆ ಸರ್ಕಾರ ಹಾಗೂ ವೈಯಕ್ತಿಕವಾಗಿ ಗೌರಿ ಹಾಗೂ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ನಾನು ಅನೇಕ ಕಡೆ ಭೇಟಿ ನೀಡಿ ಬರ ಪರಿಶೀಲನೆ ಮಾಡಿದ್ದು, ಈಗಾಗಲೇ 102 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದ್ದು, ಉಳಿದ ಕಡೆ ಪರಿಶೀಲನೆ ನಡೆಯುತ್ತಿದೆ. ಯಾರೂ ಆತುರ ಪಡುವುದು ಬೇಡ” ಎಂದು ತಿಳಿಸಿದರು.

“ಎಷ್ಟೋ ಕಡೆ ಬೆಳೆ ನಾಶವಾಗಿದ್ದು, ಅಂತರ್ಜಲ ಕುಸಿದಿದೆ. ಅನೇಕ ಕಡೆ ಬೆಳೆ ಹಾಕಲು ಆಗಿಲ್ಲ. ಮುಂದಿನ ದಿನಗಳಲ್ಲಿ ಕುಡಿಯುವ ನೀರು ಹಾಗೂ ವಿದ್ಯುತ್ ಅಭಾವ ಹೆಚ್ಚಾಗುವ ಸಾಧ್ಯತೆಗಳಿವೆ. ಕಳೆದ ವಾರ 19,000ಕ್ಕೂ ಹೆಚ್ಚು ಮೆಗಾ ವ್ಯಾಟ್ ವಿದ್ಯುತ್ ಗೆ ಬೇಡಿಕೆ ಉಂಟಾಗಿತ್ತು. 11, 12ರೂ. ಗೆ ವಿದ್ಯುತ್ ಖರೀದಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ರಾತ್ರಿ ವೇಳೆ ವಿದ್ಯುತ್ ಬಳಕೆ ಹೆಚ್ಚಾಗಿದೆ. ನೆರೆ ರಾಜ್ಯಗಳ ಜೊತೆ ಚರ್ಚೆ ಮಾಡಲು ಸಚಿವರಿಗೆ ಸೂಚಿಸಿರುವೆ. ನಮ್ಮ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಅನೇಕ ಕಂಪನಿಗಳು ಬರುತ್ತಿದ್ದು, ವಿದ್ಯುತ್, ನೀರು, ಭೂಮಿ ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ” ಎಂದು ವಿವರಿಸಿದರು.

“ವಿಘ್ನ ನಿವಾರಕ ವಿನಾಯಕನ ಹಬ್ಬದ ಸಂದರ್ಭದಲ್ಲಿ ನಾವು ಉತ್ತಮ ಮಳೆ ಆಗುವಂತೆ ಪ್ರಾರ್ಥನೆ ಮಾಡಬೇಕಾಗಿದೆ. ಮುಂದಿನ ದಿನಗಳಲ್ಲಿ ಬರದ ನೋವು ಹೆಚ್ಚಲಿದೆ. ಬೆಲೆಗಳು ಗಗನಕ್ಕೆ ಏರುತ್ತಿದೆ. ಜಲ್ಲಿ ಬೆಲೆ 40% ಏರಿಕೆಯಾಗಿದ್ದು, ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಆಗುತ್ತಿಲ್ಲ” ಎಂದರು.

18ರಂದು ದಕ್ಷಿಣ ಕನ್ನಡದಲ್ಲಿ ಸಚಿವ ಸಂಪುಟ ಸಭೆ

“ಇದೇ ತಿಂಗಳು 18ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಚಿವ ಸಂಪುಟ ಸಭೆ ಮಾಡುತ್ತಿದ್ದು, ಆ ಭಾಗದ ಶಾಸಕರು, ಮಂತ್ರಿಗಳು, ಸಚಿವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆ ಭಾಗದ ಜನ ಉದ್ಯೋಗಕ್ಕಾಗಿ ಹೊರಗೆ ಹೋಗುತ್ತಿರುವುದನ್ನು ತಪ್ಪಿಸಿ, ಅಲ್ಲಿನ ಪ್ರಾಕೃತಿಕ ಸಂಪತ್ತು ಬಳಸಿಕೊಂಡು ಅವರ ಬದುಕಿನಲ್ಲಿ ಬದಲಾವಣೆ ತರಲು ಅನೇಕ ಹೊಸ ಚಿಂತನೆಗಳನ್ನು ಘೋಷಣೆ ಮಾಡಲಾಗುವುದು” ಎಂದು ಹೇಳಿದರು.

ಕಲ್ಲಿದ್ದಲು ನಿಕ್ಷೇಪ ಬಳಿ ಥರ್ಮಲ್ ವಿದ್ಯುತ್ ಕೇಂದ್ರ ಸ್ಥಾಪನೆಗೆ ನಿರ್ಧಾರ

ಬರ ಪರಿಸ್ಥಿತಿ ನಿಭಾಯಿಸಲು ಸರ್ಕಾರದ ತಯಾರಿ ಬಗ್ಗೆ ಕೇಳಿದಾಗ, “ನಾನು ಇಂಧನ ಸಚಿವನಾಗಿದ್ದಾಗ ವಿದ್ಯುತ್ ಉತ್ಪಾದನೆ ಪ್ರಮಾಣ ಹೆಚ್ಚಿಸಿದ್ದೆವು. ಬಿಜೆಪಿ ಅವಧಿಯಲ್ಲಿ ಹೆಚ್ಚಳ ಮಾಡಿಲ್ಲ. ಜಾರ್ಜ್ ಅವರು ಸಚಿವರಾದ ಬಳಿಕ ಅನೇಕ ಯೋಜನೆ ರೂಪಿಸಿದ್ದು, ಕಲ್ಲಿದ್ದಲು ನಿಕ್ಷೇಪ ಇರುವ ಕಡೆಗಳಲ್ಲೇ ತುರ್ತಾಗಿ ಥರ್ಮಲ್ ಇಂಧನ ತಯಾರಿಕ ಘಟಕ ಸ್ಥಾಪಿಸಬೇಕು. ಒನ್ ನೇಷನ್ ಒನ್ ಗ್ರಿಡ್ ಮಾಡಲಾಗಿದ್ದು, ಎಲ್ಲೆ ವಿದ್ಯುತ್ ಉತ್ಪಾದನೆಯಾದರೂ ನಾವು ನಮ್ಮ ರಾಜ್ಯಕ್ಕೆ ತರಬಹುದು. ಇದಕ್ಕೆ ಸರಬರಾಜು ವೆಚ್ಚ ಬೀಳಲಿದೆ. ಈ ವಿಚಾರವಾಗಿ ಇಂಧನ ಸಚಿವರು ಹಾಗೂ ಇಲಾಖೆ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇನೆ.

ಬರ, ಕಸ್ತೂರಿ ರಂಗನ್ ವರದಿ ಚರ್ಚೆಗೆ ವಿಶೇಷ ಅಧಿವೇಶನ

ಬರದ ಘೋಷಣೆ ಎಲ್ಲಿಯವರೆಗೆ ಬಂದಿದೆ ಎಂದು ಕೇಳಿದಾಗ, “ಬಿಜೆಪಿಯವರಿಗೆ ರಾಜಕಾರಣವೇ ಹೆಚ್ಚಾಗಿದೆ. ರೈತರ ವಿಚಾರ ಚರ್ಚೆ ಹಾಗೂ ಕಸ್ತೂರಿ ರಂಗನ್ ವಿಚಾರವಾಗಿ ಚರ್ಚೆ ಮಾಡಲು 3 ದಿನಗಳ ವಿಶೇಷ ಅಧಿವೇಶನ ಕರೆಯಲಾಗಿದೆ. ನಮ್ಮ ಶಾಸಕರ ಜೊತೆಗೆ ಬಿಜೆಪಿ ಶಾಸಕರು ಕೂಡ ಬೇಸರ ವ್ಯಕ್ತಪಡಿಸಿ ತಮ್ಮ ನೋವು ಹಂಚಿಕೊಂಡಿದ್ದಾರೆ. ಹೀಗಾಗಿ ಈ ವಿಚಾರ ಚರ್ಚೆಗೆ 21ರಿಂದ 23ರ ವರೆಗೆ ಅಧಿವೇಶನ ಕರೆಯಲಾಗಿದೆ. ಶಾಸಕರು ಗಾಬರಿ ಆಗುವುದು ಬೇಡ. ರಾಜಕಾರಣ ಮಾಡುವವರಿಗೆ ನಾವು ಏನೂ ಮಾಡಲು ಆಗುವುದಿಲ್ಲ. ಬರ ಘೋಷಣೆ ಶೀಘ್ರವೇ ಪ್ರಕಟಿಸಲಾಗುವುದು” ಎಂದರು.

ಇಡೀ ದಿನ ಕ್ಷೇತ್ರಕ್ಕೆ ಮೀಸಲಿಟ್ಟಿದ್ದೀರಿ ಎಂದು ಕೇಳಿದಾಗ, “ಇದೇ ನಮ್ಮ ಮೂಲ, ಬೇರು. ಭಾನುವಾರ ಹಾಸ್ಟೆಲ್ ಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ಚರ್ಚೆ ಮಾಡಿದೆ. ಇಲ್ಲಿ ಇಬ್ಬರು ಸ್ಥಳೀಯರು ಬಿಟ್ಟರೆ ಉಳಿದವರು ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಬೇರೆ ಹಾಸ್ಟೆಲ್ ಹುಡುಗರು ಹಬ್ಬಕ್ಕೆ ಹೋಗಿರುವ ಹಿನ್ನೆಲೆಯಲ್ಲಿ ಹೋಗಲು ಸಾಧ್ಯವಾಗಿಲ್ಲ. ನಮ್ಮ ಮನೆ ಮಕ್ಕಳ ಮೇಲೆ ನಿಗಾ ಇಟ್ಟು ಅವರು ತಪ್ಪು ದಾರಿಗೆ ಹೋಗದಂತೆ ಕಾಪಾಡಿಕೊಳ್ಳಬೇಕು” ಎಂದರು.

ಎಲ್ಲರಿಗೂ ಆಹ್ವಾನ ನೀಡಿದ್ದೇವೆ

ಸರ್ಕಾರದ 100 ದಿನಗಳ ಕಾರ್ಯಕ್ರಮಕ್ಕೆ ಹರಿಪ್ರಸಾದ್ ಅವರನ್ನು ಆಹ್ವಾನಿಸಿಲ್ಲ ಎಂಬ ಪ್ರಶ್ನೆಗೆ, “ನಾವು ಆಹ್ವಾನಿಸಿಲ್ಲ ಎಂದು ಹೇಳಿದವರು ಯಾರು? ವಿರೋಧ ಪಕ್ಷಗಳ ಶಾಸಕರು ಸೇರಿದಂತೆ ಎಲ್ಲರನ್ನು ಆಹ್ವಾನಿಸಿದ್ದೇವೆ. ವೇದಿಕೆ ಮೇಲೆ ನಮ್ಮದೇ ಆದ ಶಿಷ್ಟಾಚಾರ ಇರುತ್ತದೆ. ಅವರು ನಮ್ಮ ಪಕ್ಷದ ಅಧ್ಯಕ್ಷರು. ಪಕ್ಷದ ಜೊತೆ ಸೇರಿಕೊಂಡೆ ನಾವು ಕೆಲಸ ಮಾಡುತ್ತೇವೆ” ಎಂದರು.

ಪ್ರಜಾಸೇವೆ ಇಲಾಖೆ ಹಾಗೂ ಕಾರ್ಯಕ್ರಮಕ್ಕೆ ಶಾಸಕರು ಭಾಗಿಯಾಗಿಲ್ಲ ಎಂದು ಕೇಳಿದಾಗ, “ಎಲ್ಲರೂ ಆಗುತ್ತಾರೆ. ಕೆಲವರಿಗೆ ಇನ್ನು ಅರ್ಥ ಆಗಿಲ್ಲ. ನಾನು ಈ ಭಾಗದಲ್ಲಿ ಮುಂಚೆಯಿಂದ ಇದನ್ನು ಮಾಡಿಕೊಂಡು ಬಂದಿದ್ದೇನೆ. ಹೀಗಾಗಿ ಈ ಬಗ್ಗೆ ನಿಮಗೆ ಗೊತ್ತಿದೆ. ಈ ಕಾರ್ಯಕ್ರಮದ ಬಗ್ಗೆ ಕೆಲವರಿಗೆ ತರಬೇತಿ ನೀಡಬೇಕು. ಜನರು ಹಾಗೂ ಜನ ಪ್ರತಿನಿಧಿಗಳ ನಡುವಿನ ಅಂತರ ಕಡಿಮೆ ಮಾಡಲು ನಾವು ಈ ಕಾರ್ಯಕ್ರಮ ರೂಪಿಸಿದ್ದೇವೆ” ಎಂದು ತಿಳಿಸಿದರು. ಸಚಿವ ಸ್ಥಾನ ಖಾಲಿ ಇದ್ದು, ಇದನ್ನು ಭರ್ತಿ ಮಾಡುವುದು ಯಾವಾಗ ಎಂದು ಕೇಳಿದಾಗ, “ಪಕ್ಷ ಹೇಳಿದಾಗ ಮಾಡಲಾಗುವುದು” ಎಂದು ತಿಳಿಸಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img