ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸಾಕಷ್ಟು ಹಿಟ್ ಹಾಡುಗಳಿಗೆ ಧ್ವನಿಯಾಗಿರುವ ಖ್ಯಾತ ಗಾಯಕಿ ನಿನ್ನೆ ಅದ್ದೂರಿಯಾಗಿ ಬರ್ತಡೇ ಪಾರ್ಟಿ ಆಚರಿಸಿಕೊಂಡಿದ್ದಾರೆ. ಮಂಗ್ಲಿಯ ಬರ್ತಡೇ ಪಾರ್ಟಿ ನಡೆಯುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿದ್ದು ಈ ವೇಳೆ ಪಾರ್ಟಿಯಲ್ಲಿ ಮಾದಕ ವಸ್ತುಗಳ ಸೇವನೆ ಪತ್ತೆಯಾಗಿದೆ.
ಹೈದರಾಬಾದ್ನ ಚೆವೆಲ್ಲಾ ತ್ರಿಪುರಾ ರೆಸಾರ್ಟ್‌ನಲ್ಲಿ ಗಾಯಕಿ ಮಂಗ್ಲಿಯ ಬರ್ತ್ಡೇ ಪಾರ್ಟಿ ಸಖತ್ ಜೋರಾಗಿ ಸೆಲೆಬ್ರೇಟ್ ಮಾಡಲಾಗಿತ್ತು. ಪಾರ್ಟಿಯ ಮೇಲೆ ದಾಳಿ ನಡೆಸಿದ ಪೊಲೀಸರು ಪಾರ್ಟಿಯಲ್ಲಿ ಭಾಗಿಯಾದವರ ರಕ್ತದ ಮಾದರಿಗಳನ್ನು ಪಡೆದು, ಪರೀಕ್ಷೆ ನಡೆಸಿದ್ದಾರೆ. ಈ ವೇಳೆ ಮಾದಕ ವಸ್ತು ಸೇವಿಸಿರುವುದು ಕನ್ಪಾರ್ಮ್ ಆಗಿದೆ.
ಮಂಗ್ಲಿ ಬರ್ತಡೇ ಪಾರ್ಟಿಯಲ್ಲಿ ಒಟ್ಟು 48 ಮಂದಿ ಭಾಗಿಯಾಗಿದ್ದರು. ಇವರನ್ನ ಪರೀಕ್ಷೆ ಮಾಡಲಾಗಿದ್ದು, 48ರಲ್ಲಿ 9 ಮಂದಿಗೆ ಡ್ರಗ್ಸ್ ಸೇವನೆಯ ಪಾಸಿಟಿವ್ ರಿಪೋರ್ಟ್ ಬಂದಿದೆ.
ಕೆಲ ವಿದೇಶಿ ಮದ್ಯಗಳು ಸಹ ಪಾರ್ಟಿ ಸ್ಥಳದಲ್ಲಿದ್ದು ಅವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಬರ್ತ್ಡೇ ಪಾರ್ಟಿ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಗಾಯಕಿ ಮಂಗ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎನ್ನಲಾಗುತ್ತಿದೆ. ಘಟನಾ ಸ್ಥಳದ ವಿಡಿಯೋ ಮಾಡುತ್ತಿದ್ದ ಪೊಲೀಸರ ಮೇಲೆ ವಾಗ್ದಾಳಿ ನಡೆಸಿದ ಗಾಯಕಿ ಮಂಗ್ಲಿ, ವಿಡಿಯೋ ರೆಕಾರ್ಡಿಂಗ್ ನಿಲ್ಲಿಸುವಂತೆ ಧಮ್ಕಿ ಹಾಕಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಎನ್‌ಡಿಪಿಎಸ್ ಆ್ಯಕ್ಟ್, ಶಬ್ದ ಮಾಲಿನ್ಯ ಕಾಯಿದೆಯಡಿ ಪೊಲೀಸರು ಕೇಸ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.



