ವಿಜಯಪುರ: ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ 110 ಕೆವಿ ಸಾಮರ್ಥ್ಯದ ವಿದ್ಯುತ್ ಟವರ್ ಏರಿ ಆತಂಕ ಸೃಷ್ಟಿಸಿದ ಘಟನೆ ವಿಜಯಪುರ ನಗರದ ಬೇಗಂ ತಲಾಬ್ ಬಳಿ ನಡೆದಿದೆ.
ವಿಜಯಪುರ ತಾಲೂಕಿನ ಕೌಜಲಗಿ ತಾಂಡಾ ನಿವಾಸಿ ರವಿ ರಾಠೋಡ ಎಂಬಾತ ಮದ್ಯ ಸೇವಿಸಿದ ಬಳಿಕ ಏಕಾಏಕಿ ವಿದ್ಯುತ್ ಟವರ್ ಏರಿದ್ದಾನೆ. ಶಿವಗಿರಿಯ 220 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ವಿಜಯಪುರ ನಗರಕ್ಕೆ ವಿದ್ಯುತ್ ಸರಬರಾಜು ಮಾಡುವ 110 ಕೆವಿ ಮಾರ್ಗದ ಟವರ್ ಇದಾಗಿದೆ.
ಸಂಜೆ ಟವರ್ ಏರಿದ ರವಿ, ಮೇಲಿಂದ ಕೂಗಾಡುತ್ತಾ ಗಲಾಟೆ ಮಾಡಿದ್ದಾನೆ. ಈ ವೇಳೆ ‘ನನಗೆ ನ್ಯಾಯ ಬೇಕು’ ಎಂದು ಕೂಗುತ್ತಿದ್ದ ಎನ್ನಲಾಗಿದೆ.
ಘಟನೆ ಗಮನಿಸಿದ ಸಾರ್ವಜನಿಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಜಲನಗರ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.
ಟವರ್‌ನಿಂದ ರವಿಯನ್ನು ಸುರಕ್ಷಿತವಾಗಿ ಕೆಳಗೆ ಇಳಿಸಲು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸುಮಾರು ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ್ದಾರೆ. ಕೊನೆಗೆ ರವಿಯನ್ನು ಸುರಕ್ಷಿತವಾಗಿ ಕೆಳಗೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ನೂರಾರು ಮಂದಿ ಸಾರ್ವಜನಿಕರು ಜಮಾಯಿಸಿದ್ದರಿಂದ ಕೆಲಕಾಲ ಕುತೂಹಲದ ವಾತಾವರಣ ನಿರ್ಮಾಣವಾಗಿತ್ತು.
ಕೆಳಗೆ ಇಳಿಸಿದ ಬಳಿಕ ರವಿಯನ್ನು ಪೊಲೀಸರು ಪ್ರಾಥಮಿಕ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಘಟನೆ ಆದರ್ಶನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.



