ಬೆಂಗಳೂರು: ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು 62 ವರ್ಷದ ವ್ಯಕ್ತಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರ್ಸಿ ಟೌನ್ನಲ್ಲಿ ನಡೆದಿದೆ.
ಮೃತರನ್ನು ಲೂಥ್ ನಾಥನ್ (62) ಎಂದು ಗುರುತಿಸಲಾಗಿದೆ. ಆಟೋ ಚಾಲಕರಾಗಿದ್ದ ಅವರು ಮನೆಯಲ್ಲಿ ರಾತ್ರಿ ಎಲೆಕ್ಟ್ರಿಕ್ ಬೈಕನ್ನು ಚಾರ್ಜ್ಗೆ ಹಾಕಿ ಹಾಲ್ನಲ್ಲಿ ಮಲಗಿದ್ದ ವೇಳೆ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆ ಗ್ರೌಂಡ್ ಫ್ಲೋರ್ನಲ್ಲಿ ಒಬ್ಬರೇ ಮಲಗಿದ್ದ ನಾಥನ್, ಫಸ್ಟ್ ಫ್ಲೋರ್ನಲ್ಲಿ ಅವರ ಮಕ್ಕಳು ವಾಸವಾಗಿದ್ದರು. ಮುಂಜಾನೆ ಸುಮಾರು 3:15ರ ವೇಳೆಗೆ ಬೈಕ್ ಬ್ಯಾಟರಿ ಸ್ಫೋಟಗೊಂಡಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಮನೆಗೆ ವ್ಯಾಪಿಸಿದೆ ಎಂದು ಹೇಳಲಾಗಿದೆ.
ಸ್ಫೋಟದ ತೀವ್ರತೆಯಿಂದ ಮನೆ ಸಂಪೂರ್ಣವಾಗಿ ಹೊತ್ತಿ ಉರಿದಿದ್ದು, ನಾಥನ್ ಸುಟ್ಟ ಸ್ಥಿತಿಯಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದಾರೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರೂ ಮನೆಗೆ ಭಾರೀ ಹಾನಿಯಾಗಿದೆ.
ಘಟನೆಯ ಕುರಿತು ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬ್ಯಾಟರಿ ಸ್ಫೋಟದ ನಿಖರ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ.



