ವಿಜಯಸಾಕ್ಷಿ ಸುದ್ದಿ, ಗದಗ: ಪುರುಷ್ಯರಿಗೆ 40 ವರ್ಷ ಮತ್ತು ಮಹಿಳೆಯರಿಗೆ ಋತುಚಕ್ರ ನಿಂತ ನಂತರ ಮೊಣಕಾಲು ನೋವು ಬರುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಇನ್ನೂ ಅನೇಕ ಜನರು ಸುದೀರ್ಘವಾಗಿ ನೋವು ನಿವಾರಕ ಮಾತ್ರೆಗಳನ್ನು ಸೇವಿಸುವುದರಿಂದ ಕೂಡಾ ತೊಂದರೆಗಳಿಗೆ ಒಳಗಾಗುತ್ತಾರೆ. ಶೇ.20 ಜನರಿಗೆ ನೈಸರ್ಗಿಕವಾಗಿ ಮತ್ತು ವಯಸ್ಸಿನಿಂದ ಕೂಡಾ ಮೊಣಕಾಲು ನೋವು ಬರುವ ಸಾಧ್ಯತೆಗಳಿವೆ. ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಿಂದಲೂ ತೊಂದರೆಯಾಗುತ್ತದೆ ಎಂದು ಅರ್ಥೋಪಿಡಿಕ್ ಡಾ. ಶರದ ಶಿರೋಳ ಹೇಳಿದರು.
ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ದಿ. ಶ್ರೀಮತಿ ಇಂದುಮತಿ ಲಕ್ಷ್ಮಣ ರಾವ್ ಪೊತ್ನೀಸ ಇವರ ಸ್ಮಾರಕ ದತ್ತಿ ಉಪನ್ಯಾಸದಲ್ಲಿ ಮೊಣಕಾಲು ಸುರಕ್ಷತೆ ಕುರಿತು ವಿಚಾರ ಸಂಕಿರಣವನ್ನು ಉದ್ದೇಶಿಸಿ ಅವರು ಉಪನ್ಯಾಸ ನೀಡುತ್ತಿದ್ದರು.
ಸಕ್ಕರೆ ಕಾಯಿಲೆ, ಬಿ.ಪಿ ಇರುವ ಸಂದರ್ಭದಲ್ಲಿ ಹೆಚ್ಚಿನ ಮಾತ್ರೆ ತೆಗೆದುಕೊಳ್ಳುವುದರಿಂದ ಕೂಡಾ ತೊಂದರೆಯಾಗುವ ಸಾಧ್ಯತೆಯಿದೆ. ಆದ್ದರಿಂದ ಮೊಣಕಾಲು ನೋವು ಬಂದಾಗ ವೈದ್ಯರಿಂದ ಪರಿಹಾರ ಕಂಡುಕೊಳ್ಳಬೇಕು. ವಯಸ್ಸಾದವರು ಮೊಣಕಾಲು ನೋವಿನಿಂದ ಅನೇಕ ತೊಂದರೆಗಳನ್ನು ಎದುರಿಸುತ್ತಾರೆ. ಈ ನಿಟ್ಟಿನಲ್ಲಿ ಅವರನ್ನು ಹೆಚ್ಚಿನ ಜಾಗೃತಿಯಿಂದ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ತಾತನಗೌಡ ಎಸ್.ಪಾಟೀಲ ಉಪಸ್ಥಿತರಿದ್ದರು. ದಿ. ಇಂದುಮತಿ ಲಕ್ಷ್ಮಣರಾವ್ ಪೊತ್ನೀಸ ಇವರ ಪರಿಚಯವನ್ನು ಜಯಶ್ರೀ ತಾತನಗೌಡ ಪಾಟೀಲ ಮಾಡಿದರು. ಅತಿಥಿ ಉಪನ್ಯಾಸಕರ ಪರಿಚಯವನ್ನು ಸುಷ್ಮಾ ಎಸ್.ಜಾಲಿ ಮಾಡಿದರು. ವಿಚಾರ ಸಂಕಿರಣದಲ್ಲಿ ರಾಜ್ಯ ಸರಕಾರ ಒಡೆತನದ ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳದ ರಾಜ್ಯ ಉಪಾಧ್ಯಕ್ಷರು ಹಾಗೂ ಗದಗ-ಬೆಟಗೇರಿ ನಗರ ಸಭೆಯ ಮಾಜಿ ಅಧ್ಯಕ್ಷರಾದ ನಾಗರತ್ನಾ ಶಿವಪ್ಪ ಮುಳಗುಂದರ ಪರಿಚಯವನ್ನು ಮಹಿಳಾ ಘಟಕದ ಉಪಾಧ್ಯಕ್ಷರಾದ ಸುಜಾತಾ ಎಸ್.ಗುಡಿಮನಿ ಮಾಡಿದರು.
ಲಲಿತಾ ಕುರಡಗಿ ಪ್ರಾರ್ಥಿಸಿದರು. ಮಹಿಳಾ ಘಟಕದ ಅಧ್ಯಕ್ಷರಾದ ನಂದಾ ಚಂದ್ರು ಬಾಳಿಹಳ್ಳಿಮಠ ಸ್ವಾಗತಿಸಿದರು. ದತ್ತಿ ಉಪನ್ಯಾಸ ಉಪ ಸಮಿತಿ ಚೇರಮನ್ ಚಂದ್ರು ಬಾಳಿಹಳ್ಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಘಟಕದ ಸದಸ್ಯರಾದ ನಿರ್ಮಲಾ ಧಶರಥರಾಜ ಕೊಳ್ಳಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಕೋಶಾಧ್ಯಕ್ಷರಾದ ಪೂರ್ಣಿಮಾ ಕೆ.ಆಟದ ವಂದಿಸಿದರು.
ಮಹಿಳಾ ಘಟಕದ ಉಪಾಧ್ಯಕ್ಷರಾದ ಸುಷ್ಮಾ ಎಸ್.ಜಾಲಿ, ಸುಜಾತಾ ಎಸ್.ಗುಡಿಮನಿ, ಸಹ ಗೌರವ ಕಾರ್ಯದರ್ಶಿ ಲಲಿತಾ ಜಿ.ತಡಸದ, ಸುಧಾ ಸಿ.ಹುಣಸಿಕಟ್ಟಿ, ಕೋಶಾಧ್ಯಕ್ಷರಾದ ಪೂರ್ಣಿಮಾ ಕೆ.ಆಟದ, ಪೊತ್ನೀಸ ಕುಟಂಬದವರು ಉಪಸ್ಥಿತರಿದ್ದರೆಂದು ಸಂಸ್ಥೆಯ ಮಹಿಳಾ ಘಟಕದ ಗೌರವ ಕಾರ್ಯದರ್ಶಿಗಳಾದ ಜ್ಯೋತಿ ರಾಮನಗೌಡ ದಾನಪ್ಪಗೌಡ್ರ ತಿಳಿಸಿದ್ದಾರೆ.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಮಹಿಳಾ ಘಟಕದ ಅಧ್ಯಕ್ಷರಾದ ನಂದಾ ಚಂದ್ರು ಬಾಳಿಹಳ್ಳಿಮಠ ಮಾತನಾಡಿ, 40 ವರ್ಷದ ನಂತರ ಹೆಚ್ಚಿನ ಜನರಿಗೆ ಮೊಣಕಾಲು ನೋವು ಬರುತ್ತಿದೆ. ಈ ನಿಟ್ಟಿನಲ್ಲಿ ಉತ್ತಮ ಆಹಾರ ಸೇವನೆಗೆ ಹೆಚ್ಚಿನ ಒತ್ತು ನೀಡಬೇಕು ಮತ್ತು ವ್ಯಾಯಾಮ, ಯೋಗದ ಕಡೆಗೆ ಹೆಚ್ಚಿನ ಗಮನ ನೀಡಬೇಕೆಂದು ತಿಳಿಸಿದರು.



