ಬೆಂಗಳೂರು: ಮಹಿಳೆಯೊಬ್ಬರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ನಗರದ ಗಂಗಮ್ಮನ ಗುಡಿ ಸರ್ಕಲ್ ಬಳಿ ನಡೆದಿದೆ.
ಸಂಜಯನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಮಂಜುನಾಥ್ ಹಲ್ಲೆಗೊಳಗಾದವರು. ಅವರು ಜಾಲಹಳ್ಳಿ ಕಡೆಗೆ ತೆರಳಲು ಬಸ್ ಹತ್ತಿದ್ದ ವೇಳೆ ಬಸ್ನಲ್ಲಿ ಮಹಿಳೆಯೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ವಿಚಾರವಾಗಿ ಬಸ್ನಲ್ಲಿ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಬಳಿಕ ಮಹಿಳೆ ತನ್ನ ಸಂಬಂಧಿಕರಿಗೆ ಕರೆ ಮಾಡಿ ಗಂಗಮ್ಮನ ಗುಡಿ ಸರ್ಕಲ್ ಬಳಿ ಬರುವಂತೆ ತಿಳಿಸಿದ್ದಾಳೆ ಎನ್ನಲಾಗಿದೆ.
ಬಸ್ ಗಂಗಮ್ಮನ ಗುಡಿ ಸರ್ಕಲ್ ಬಳಿ ಬರುತ್ತಿದ್ದಂತೆ ಸ್ಥಳಕ್ಕೆ ಬಂದ ಯುವಕರ ಗುಂಪು ಹೆಡ್ ಕಾನ್ಸ್ಟೇಬಲ್ ಮೇಲೆ ಹಲ್ಲೆ ನಡೆಸಿದೆ ಎಂದು ತಿಳಿದುಬಂದಿದೆ. ತಾನು ಪೊಲೀಸ್ ಸಿಬ್ಬಂದಿ ಎಂದು ಹೇಳಿಕೊಂಡರೂ ಬಿಡದೆ ಹಲ್ಲೆ ನಡೆಸಿದ್ದು, ಬಟ್ಟೆ ಹರಿದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಯಿಂದ ಮಂಜುನಾಥ್ ಅವರ ಮುಖ ಹಾಗೂ ದೇಹದ ವಿವಿಧ ಭಾಗಗಳಿಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ಮಹಿಳೆ ಹಾಗೂ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಇಬ್ಬರೂ ಪರಸ್ಪರ ದೂರು-ಪ್ರತಿದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆ ಕುರಿತು ತನಿಖೆ ಮುಂದುವರಿಸಿದ್ದಾರೆ.



