ವಿಜಯಸಾಕ್ಷಿ ಸುದ್ದಿ,ಲಕ್ಷ್ಮೇಶ್ವರ : ಪಟ್ಟಣದಲ್ಲಿ ಮಾರ್ಚ್ 27ರಿಂದ ಪ್ರಾರಂಭವಾಗಿದ್ದ ರೈತರ ಜೋಳ ಖರೀದಿ ನೋಂದಣಿ ಕಾರ್ಯಕ್ರಮವನ್ನು ಮುಂದುವರಿಸುವಂತೆ ಆಗ್ರಹಿಸಿ ಭಾರತಿಯ ಕಿಸಾನ್ ಸಂಘದಿಂದ ತಹಸೀಲ್ದಾರ ವಾಸುದೇವ ಸ್ವಾಮಿ ಅವರಿಗೆ ಮನವಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕಾ ಭಾರತಿಯ ಕಿಸಾನ್ ಸಂಘದ ಅಧ್ಯಕ್ಷ ಟಾಕಪ್ಪ ಸಾತಪುತೆ, ತಾಲೂಕಿನಲ್ಲಿ ರೈತರ ಅನುಕೂಲಕ್ಕಾಗಿ ಜೋಳದ ಖರೀದಿ ಕೇಂದ್ರ ಸ್ಥಾಪಿಸಿದ್ದು ಅನುಕೂಲವಾಗಿತ್ತು. ಆದರೆ, ಪ್ರಾರಂಭದಿಂದ ಇಂದಿನವರೆಗೆ ತಾಲೂಕಿನ ಕೇವಲ 25 ರೈತರು ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ.
ಏಪ್ರಿಲ್ 16ರಂದು ಸದರಿ ನೋಂದಣೆ ಕಾರ್ಯ ಸ್ಥಗಿತಗೊಂಡಿದ್ದು, ಇದರಿಂದ ರೈತರಿಗೆ ತೊಂದರೆಯಾಗಿದೆ.
ಕೂಡಲೇ ನೋಂದಣಿ ಅವಧಿ ವಿಸ್ತರಿಸುವ ಮೂಲಕ ರೈತರಿಗೆ ಅನೂಕೂಲ ಮಾಡಿಕೊಡಬೇಕು ಎಂದರು.
ಕೆಲವು ರೈತರಿಗೆ ಜಿಪಿಎಸ್ ಬಗ್ಗೆ ಮಾಹಿತಿ ಇಲ್ಲದ ಕಾರಣ ತಮ್ಮ ಹೊಲದ ಜಿಪಿಎಸ್ ಮಾಡಿಸಿಲ್ಲ. ಕಾರಣ, ಸಂಬಂಧಿಸಿದ ಅಧಿಕಾರಿಗಳು ಮಾಹಿತಿ ಇಲ್ಲದ ರೈತರ ಹೊಲಗಳಿಗೆ ತೆರಳಿ ಜಿಪಿಎಸ್ ಮಾಡಿಸಲು ಅವಕಾಶ ಮಾಡಿಕೊಡಬೇಕು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಫಕ್ಕೀರಪ್ಪ ಚಿಕ್ಕಣ್ಣನವರ, ಬಸವಣೆಪ್ಪ ಚಿಕ್ಕಣ್ಣನವರ, ಮಹಾದೇವಪ್ಪ ಹುಲಗೂರ, ಶಂಕ್ರಪ್ಪ ಅಣ್ಣಿಗೇರಿ, ಯಲ್ಲಪ್ಪ ಅಣ್ಣಿಗೇರಿ, ಬಸವರಾಜ ಸಂಬಾಜಿ, ಫಕ್ಕೀರಪ್ಪ ಮಾಳಗಿಮನಿ, ಬಸನಗೌಡ್ರ ಪಾಟೀಲ್ ಮುಂತಾದವರಿದ್ದರು.