ಅಫ್ಘಾನಿಸ್ತಾನ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡ ಪ್ರಕಟವಾಗಿದ್ದು, ಅನುಭವಿ ಆಲ್ರೌಂಡರ್ ಕೃನಾಲ್ ಪಾಂಡ್ಯ ಅವರಿಗೆ ಮತ್ತೊಮ್ಮೆ ನಿರಾಸೆಯಾಗಿದೆ. ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದ ಕೃನಾಲ್ಗೆ ಆಯ್ಕೆ ಸಮಿತಿ ಅವಕಾಶ ನೀಡದ ಬೆನ್ನಲ್ಲೇ, ಅವರು ಮೊದಲ ಬಾರಿಗೆ ಈ ಕುರಿತು ಸಾರ್ವಜನಿಕವಾಗಿ ಭಾವುಕವಾಗಿ ಪ್ರತಿಕ್ರಿಯಿಸಿದ್ದಾರೆ.
ತಂಡ ಪ್ರಕಟವಾದ ಕೆಲವೇ ಕ್ಷಣಗಳಲ್ಲಿ ಕೃನಾಲ್ ಪಾಂಡ್ಯ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಭಾರತದ ತ್ರಿವರ್ಣ ಧ್ವಜದ ಎಮೋಜಿಯೊಂದಿಗೆ “Hope is Still Alive” ಎಂದು ಬರೆದುಕೊಂಡಿದ್ದಾರೆ. ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಟೀಂ ಇಂಡಿಯಾಗೆ ಮರಳುವ ಅವರ ನಿರೀಕ್ಷೆ ಹಾಗೂ ಛಲವನ್ನು ವ್ಯಕ್ತಪಡಿಸಿದೆ.
ಕಳೆದ ಎರಡು ಐಪಿಎಲ್ ಆವೃತ್ತಿಗಳಲ್ಲಿ ಕೃನಾಲ್ ಪಾಂಡ್ಯ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಆರ್ಸಿಬಿ ಚಾಂಪಿಯನ್ ಆಗುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
2025ರ ಐಪಿಎಲ್ನಲ್ಲಿ ಕೃನಾಲ್ 15 ಪಂದ್ಯಗಳಲ್ಲಿ 17 ವಿಕೆಟ್ ಕಬಳಿಸಿದ್ದರು. ಬ್ಯಾಟಿಂಗ್ನಲ್ಲೂ 7 ಇನಿಂಗ್ಸ್ಗಳಲ್ಲಿ 109 ರನ್ ಗಳಿಸಿದ್ದರು. ಈ ಆವೃತ್ತಿಯಲ್ಲಿ ದೆಹಲಿ ವಿರುದ್ಧ 73 ರನ್ಗಳ ಭರ್ಜರಿ ಇನ್ನಿಂಗ್ಸ್ ಆಡಿದ್ದರು.
ಇನ್ನು 2026ರ ಐಪಿಎಲ್ನಲ್ಲಿ 16 ಪಂದ್ಯಗಳನ್ನು ಆಡಿದ್ದ ಕೃನಾಲ್ 14 ವಿಕೆಟ್ಗಳ ಜೊತೆಗೆ 226 ರನ್ ಗಳಿಸಿದ್ದರು. ಮುಂಬೈ ಇಂಡಿಯನ್ಸ್ ವಿರುದ್ಧ 73 ರನ್ಗಳ ಮಹತ್ವದ ಇನ್ನಿಂಗ್ಸ್ ಕೂಡ ಅವರ ಬ್ಯಾಟ್ನಿಂದ ಮೂಡಿಬಂದಿತ್ತು.
ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಟೀಂ ಇಂಡಿಯಾಗೆ ಆಯ್ಕೆಯಾಗದಿರುವುದು ಅವರ ಅಭಿಮಾನಿಗಳಲ್ಲಿ ಅಸಮಾಧಾನ ಮೂಡಿಸಿದೆ. ಕೃನಾಲ್ ಪಾಂಡ್ಯ ಭಾರತ ಪರ ಇದುವರೆಗೆ 5 ಏಕದಿನ ಹಾಗೂ 19 ಟಿ20 ಪಂದ್ಯಗಳನ್ನು ಆಡಿದ್ದಾರೆ. 2021ರಲ್ಲಿ ಅವರು ಕೊನೆಯ ಬಾರಿಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದರು.
ಅಂದಿನಿಂದ ರಾಷ್ಟ್ರೀಯ ತಂಡಕ್ಕೆ ಮರಳಲು ಕಠಿಣ ಪರಿಶ್ರಮ ನಡೆಸುತ್ತಿರುವ ಕೃನಾಲ್, ಇದೀಗ ಮತ್ತೊಮ್ಮೆ ಅವಕಾಶದಿಂದ ವಂಚಿತರಾಗಿದ್ದಾರೆ. ಹೀಗಾಗಿ ಅವರ “ಭರವಸೆ ಇನ್ನೂ ಜೀವಂತವಾಗಿದೆ” ಎಂಬ ಭಾವುಕ ಸಂದೇಶ ಅಭಿಮಾನಿಗಳ ಗಮನ ಸೆಳೆದಿದೆ.
ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಶ್ರೇಯಸ್ ಅಯ್ಯರ್ ನಾಯಕತ್ವ ವಹಿಸಲಿದ್ದು, ವೇಗಿ ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳಿದ್ದಾರೆ. ನಿತೀಶ್ ಕುಮಾರ್ ರೆಡ್ಡಿ ಅವರಿಗೂ ತಂಡದಲ್ಲಿ ಸ್ಥಾನ ದೊರೆತಿದೆ.
ನಿರಂತರ ಪರಿಶ್ರಮದ ನಡುವೆಯೂ ಟೀಂ ಇಂಡಿಯಾ ಜರ್ಸಿ ತೊಡುವ ಅವಕಾಶಕ್ಕಾಗಿ ಕಾಯುತ್ತಿರುವ ಕೃನಾಲ್ ಪಾಂಡ್ಯಗೆ ಮುಂದಿನ ದಿನಗಳಲ್ಲಾದರೂ ಆಯ್ಕೆ ಸಮಿತಿ ಮಣೆ ಹಾಕುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.



