HomeKarnataka Newsಆಸ್ತಿ ಹಕ್ಕು ವಿವಾದಗಳ ವಿಚಾರಣೆ ಕುಟುಂಬ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ: ಹೈಕೋರ್ಟ್

ಆಸ್ತಿ ಹಕ್ಕು ವಿವಾದಗಳ ವಿಚಾರಣೆ ಕುಟುಂಬ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ: ಹೈಕೋರ್ಟ್

For Dai;y Updates Join Our whatsapp Group

Spread the love

ಬೆಂಗಳೂರು: ಆಸ್ತಿ ಹಕ್ಕು ಹಾಗೂ ಉತ್ತರಾಧಿಕಾರಕ್ಕೆ ಸಂಬಂಧಿಸಿದ ಸಿವಿಲ್ ವ್ಯಾಜ್ಯಗಳನ್ನು ಕೌಟುಂಬಿಕ ನ್ಯಾಯಾಲಯದ ವ್ಯಾಪ್ತಿಗೆ ವಿಸ್ತರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಕುಟುಂಬ ನ್ಯಾಯಾಲಯಗಳ ಅಧಿಕಾರವನ್ನು ಪ್ರತಿಯೊಂದು ಆಸ್ತಿ ಹಕ್ಕು ಅಥವಾ ಉತ್ತರಾಧಿಕಾರ ವಿವಾದಕ್ಕೂ ಅನ್ವಯಿಸಿದರೆ, ಅವುಗಳ ಸ್ಥಾಪನೆಯ ಮೂಲ ಉದ್ದೇಶವೇ ದುರ್ಬಲಗೊಳ್ಳುವುದಲ್ಲದೆ, ಸಿವಿಲ್ ನ್ಯಾಯಾಲಯಗಳ ನಿಗದಿತ ಅಧಿಕಾರ ವ್ಯಾಪ್ತಿಯ ಮೇಲೆಯೂ ಅತಿಕ್ರಮಣವಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.

ಮೃತ ಜೆ.ಪಿ. ನಾರಾಯಣಸ್ವಾಮಿ ಅವರ ಆಸ್ತಿಗೆ ಸಂಬಂಧಿಸಿದ ಪ್ರಕರಣದಲ್ಲಿ, ಮೃತರ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ವಿಚಾರಣೆಗೆ ಸ್ವೀಕರಿಸಿದ್ದನ್ನು ಪ್ರಶ್ನಿಸಿ ಅವರ ಪತ್ನಿ ಹೆಚ್.ಬಿ. ಶೋಭಾ ಹಾಗೂ ಮಕ್ಕಳು ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಮನ್ಮಧ ರಾವ್ ಅವರಿದ್ದ ಏಕಸದಸ್ಯ ಪೀಠವು ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ.

ತೀರ್ಪಿನಲ್ಲಿ ನ್ಯಾಯಾಲಯ, ಕುಟುಂಬ ನ್ಯಾಯಾಲಯಗಳ ಕಾಯ್ದೆ ಕುಟುಂಬ ಸಂಬಂಧಿತ ವಿವಾದಗಳನ್ನು ತ್ವರಿತವಾಗಿ ಹಾಗೂ ಸಂಧಾನದ ಮೂಲಕ ಬಗೆಹರಿಸುವ ಉದ್ದೇಶದಿಂದ ಜಾರಿಗೆ ತರಲಾಗಿದೆ ಎಂದು ತಿಳಿಸಿದೆ. ಆದರೆ ಸಂಕೀರ್ಣ ಸ್ವರೂಪದ ನಾಗರಿಕ ವ್ಯಾಜ್ಯಗಳು ಮತ್ತು ಆಸ್ತಿ ಹಕ್ಕು ಸಂಬಂಧಿತ ಪ್ರಕರಣಗಳ ವಿಚಾರಣೆಗೆ ಅದರ ಅಧಿಕಾರವನ್ನು ವಿಸ್ತರಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ.

ಪ್ರಸ್ತುತ ಪ್ರಕರಣದಲ್ಲಿ ದಾಂಪತ್ಯ ಕಲಹ ಅಥವಾ ಕುಟುಂಬ ಸಂಬಂಧಿತ ವಿವಾದವಿಲ್ಲ. ಬದಲಾಗಿ, ಮೃತ ವ್ಯಕ್ತಿಯ ಆಸ್ತಿಯ ಮೇಲಿನ ಹಕ್ಕು ಹಾಗೂ ಸಂಬಂಧಿತ ವ್ಯಕ್ತಿಗಳ ಕಾನೂನು ಸ್ಥಾನಮಾನವನ್ನು ನಿರ್ಧರಿಸುವುದೇ ಮುಖ್ಯ ವಿಚಾರವಾಗಿದೆ. ಹೀಗಾಗಿ ಇದು ಕೌಟುಂಬಿಕ ವಿವಾದವಲ್ಲದೆ, ಸಿವಿಲ್ ಸ್ವರೂಪದ ಸಂಕೀರ್ಣ ವ್ಯಾಜ್ಯವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಸಿವಿಲ್ ನ್ಯಾಯಾಲಯಕ್ಕೆ ಹೋಗಲು ಅವಕಾಶ

ಈ ಹಿನ್ನೆಲೆಯಲ್ಲಿ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದ ಹೈಕೋರ್ಟ್, ಪ್ರತಿವಾದಿಗಳ ಕಾನೂನು ಪ್ರತಿನಿಧಿಗಳು ತಮ್ಮ ಹಕ್ಕುಗಳಿಗೆ ಸಂಬಂಧಿಸಿದಂತೆ ಯಾವುದೇ ದೂರು ಅಥವಾ ಹಕ್ಕು ಪ್ರತಿಪಾದನೆ ಹೊಂದಿದ್ದರೆ, ಸಂಬಂಧಿತ ಸಿವಿಲ್ ನ್ಯಾಯಾಲಯದ ಮುಂದೆ ಹೊಸದಾಗಿ ದಾವೆ ಹೂಡುವ ಸ್ವಾತಂತ್ರ್ಯ ಹೊಂದಿದ್ದಾರೆ ಎಂದು ಸೂಚಿಸಿದೆ.

ಪ್ರಕರಣದ ಹಿನ್ನೆಲೆ

ಮೃತ ಜೆ.ಪಿ. ನಾರಾಯಣಸ್ವಾಮಿ ಅವರ ಆಸ್ತಿಗೆ ಸಂಬಂಧಿಸಿದ ವಿವಾದದಲ್ಲಿ, ಅವರ ತಾಯಿ ಪಾರ್ವತಮ್ಮ ಅವರು ಅರ್ಜಿ ಸಲ್ಲಿಸಿ, ಹೆಚ್.ಬಿ. ಶೋಭಾ ಅವರು ನಾರಾಯಣಸ್ವಾಮಿ ಅವರ ಕಾನೂನುಬದ್ಧ ಪತ್ನಿಯಲ್ಲ ಹಾಗೂ ಅವರಿಬ್ಬರು ಮಕ್ಕಳು ಮೃತರ ವಾರಸುದಾರರಲ್ಲ ಎಂದು ಘೋಷಣೆ ನೀಡುವಂತೆ ಕೋರಿದ್ದರು. ಜೊತೆಗೆ, ನಾರಾಯಣಸ್ವಾಮಿ ಅವರ ಆಸ್ತಿಯಲ್ಲಿ ಯಾವುದೇ ಹಕ್ಕು ಕೋರುವುದನ್ನು ತಡೆಯಲು ಶಾಶ್ವತ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿದ್ದರು.

ಈ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯವು ಕುಟುಂಬ ನ್ಯಾಯಾಲಯಗಳ ಕಾಯ್ದೆಯ ಸೆಕ್ಷನ್ 7(1)(a) ಮತ್ತು 7(1)(b) ಅಡಿಯಲ್ಲಿ ವಿಚಾರಣೆಗೆ ಸ್ವೀಕರಿಸಿತ್ತು. ಇದನ್ನು ಪ್ರಶ್ನಿಸಿ ಶೋಭಾ ಹಾಗೂ ಮಕ್ಕಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಯುತ್ತಿದ್ದ ವೇಳೆ ಪಾರ್ವತಮ್ಮ ಅವರು 2020ರ ಫೆಬ್ರವರಿ 24ರಂದು ನಿಧನರಾಗಿದ್ದು, ಬಳಿಕ ಅವರ ಕಾನೂನು ವಾರಸುದಾರರು ಪ್ರಕರಣವನ್ನು ಮುಂದುವರಿಸಿದ್ದರು.

ಅರ್ಜಿದಾರರ ಪರ ವಕೀಲರು, ಇದು ಮೂಲತಃ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ಸಿವಿಲ್ ವ್ಯಾಜ್ಯವಾಗಿದ್ದು, ಕೌಟುಂಬಿಕ ನ್ಯಾಯಾಲಯಕ್ಕೆ ಇಂತಹ ಪ್ರಕರಣದ ವಿಚಾರಣೆ ನಡೆಸುವ ಅಧಿಕಾರವಿಲ್ಲ ಎಂದು ವಾದಿಸಿದ್ದರು. ಈ ವಾದವನ್ನು ಪರಿಗಣಿಸಿದ ಹೈಕೋರ್ಟ್, ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿ ಮಹತ್ವದ ಸ್ಪಷ್ಟನೆ ನೀಡಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!