ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈಗಾಗಲೇ ಸಾಕಷ್ಟು ಚಿತ್ರೀಕರಣ ಮುಗಿದಿದ್ದು ಹಲವು ಸ್ಟಾರ್ ನಟ, ನಟಿಯರು ಚಿತ್ರಕ್ಕೆ ಎಂಟ್ರಿಕೊಟ್ಟಿದ್ದಾರೆ. ಇದೀಗ ಟಾಕ್ಸಿಕ್ ಸಿನಿಮಾ ತಂಡಕ್ಕೆ ಮತ್ತೋರ್ವ ಸ್ಟಾರ್ ನಟಿ ಎಂಟ್ರಿಕೊಟ್ಟಿದ್ದಾರೆ.
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾನಲ್ಲಿ ಬಾಲಿವುಡ್ ಸ್ಟಾರ್ ನಟಿ ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅವರ ಜೊತೆಗೆ ನಯನತಾರಾ ಸಹ ಪ್ರಮುಖವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಸಿನಿಮಾಕ್ಕೆ ಮತ್ತೊಬ್ಬ ನಾಯಕಿಯ ಎಂಟ್ರಿ ಆಗಿದೆ. ಆಕೆಯೇ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಮೂಲಕ ಸ್ಟಾರ್ ನಟಿಯಾಗಿ ಗುರುತಿಸಿಕೊಂಡ ನಟಿ ರುಕ್ಮಿಣಿ ವಸಂತ್.
ಮೂಲಗಳ ಪ್ರಕಾರ ರುಕ್ಮಿಣಿ ವಸಂತ್ ‘ಟಾಕ್ಸಿಕ್’ ಸಿನಿಮಾದ ಕೆಲ ದಿನಗಳ ಚಿತ್ರೀಕರಣದಲ್ಲೂ ಭಾಗಿಯಾಗಿದ್ದಾರಂತೆ. ‘ಟಾಕ್ಸಿಕ್’ ಸಿನಿಮಾದ ಒಂದು ಪ್ರಮುಖ ಪಾತ್ರಕ್ಕಾಗಿ ರುಕ್ಮಿಣಿ ವಸಂತ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ರುಕ್ಮಿಣಿ ಅವರಿಗೆ ಹೆಚ್ಚು ಸ್ಕ್ರೀನ್ ಟೈಮ್ ಇರದೇ ಇದ್ದರು ಅವರ ಪಾತ್ರ ಕತೆಗೆ ಬಹಳ ಮಹತ್ವದ್ದಾಗಿರಲಿದೆಯಂತೆ. ಅಂದ ಹಾಗೆ ಈ ಬಗ್ಗೆ ರುಕ್ಷ್ಮಿಣಿ ವಸಂತ್ ಆಗಲಿ ಟಾಕ್ಸಿಕ್ ಚಿತ್ರತಂಡವಾಗಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
‘ಟಾಕ್ಸಿಕ್’ ಸಿನಿಮಾ ಅನ್ನು ಮಲಯಾಳಂ ನಟಿ, ನಿರ್ದೇಶಕ ಗೀತು ಮೋಹನ್ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾನಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಸಿನಿಮಾನಲ್ಲಿ ಹಾಲಿವುಡ್ ನಟರಾದ ಕಿಲಿ ಪೌಲ್, ಡಾರೆಲ್ ಡಿಸಿಲ್ವಾ, ಭಾರತದ ನಟರುಗಳಾದ ತಾರಾ ಸತಾರಿಯಾ, ಹುಮಾ ಖುರೇಷಿ, ಅಮಿತ್ ತಿವಾರಿ ಇನ್ನೂ ಹಲವರು ನಟಿಸುತ್ತಿದ್ದಾರೆ.