ಹೈದರಾಬಾದ್: ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣವಾಗಿ ಸುಟ್ಟುಹೋದ ಘಟನೆ ಕೆಪಿಎಚ್ಬಿ ಪ್ರದೇಶದಲ್ಲಿ ನಡೆದಿದೆ.
ಸಿಬ್ಬಂದಿಯ ಜಾಗರೂಕತೆಯಿಂದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 18ಕ್ಕೂ ಹೆಚ್ಚು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೊತ್ತಿ ಉರಿಯುತ್ತಿದ್ದ ಬಸ್‌ನ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಶುಕ್ರವಾರ ರಾತ್ರಿ, ಶ್ರೀ ದುರ್ಗಾ ಮಹೇಶ್ವರಿ ಟ್ರಾವೆಲ್ಸ್ ಸಂಸ್ಥೆಗೆ ಸೇರಿದ ಎಸಿ ಸ್ಲೀಪರ್ ಬಸ್ ಮಿಯಾಪುರದಿಂದ ಹೊರಟು ಆಂಧ್ರಪ್ರದೇಶದ ಪಾಲಕೊಲ್ಲು ಮಾರ್ಗವಾಗಿ ಎಸ್‌ಆರ್ ನಗರ ಕಡೆಗೆ ಸಾಗುತ್ತಿತ್ತು. ಈ ವೇಳೆ ಚಾಲಕರ ಕ್ಯಾಬಿನ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.
ತಕ್ಷಣವೇ ಸಿಬ್ಬಂದಿ ಬಸ್ ನಿಲ್ಲಿಸಿ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ ಪರಿಣಾಮ ದೊಡ್ಡ ದುರಂತ ತಪ್ಪಿದೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಟ್ರಾಫಿಕ್ ಸಿಐ ಜನಯ್ಯ ಹಾಗೂ ಅಗ್ನಿಶಾಮಕ ದಳ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಈ ಘಟನೆಯಲ್ಲಿ ಯಾವುದೇ ಸಾವು-ನೋವು ವರದಿಯಾಗಿಲ್ಲ.
ಆದರೆ ಈ ಘಟನೆ ಕಾರಣವಾಗಿ ಸ್ಥಳದಲ್ಲಿ ಕೆಲಕಾಲ ಭಾರೀ ಸಂಚಾರ ದಟ್ಟಣೆ ಉಂಟಾಯಿತು. ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.



