ವಿಜಯಸಾಕ್ಷಿ ಸುದ್ದಿ, ಧಾರವಾಡ: ಸಾರ್ವಜನಿಕರು ರಸ್ತೆಯಲ್ಲಿ ವಾಹನ ಚಾಲನೆ ಮಾಡುವಾಗ ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ರಸ್ತೆ ಅಪಘಾತಗಳನ್ನು ತಡೆಗಟ್ಟಬಹುದಾಗಿದೆ. ಚಾಲಕರು ತಮ್ಮ ಹಾಗೂ ತಮ್ಮ ಸಂಗಡಿಗ ಸವಾರರ ಸುರಕ್ಷಿತೆ ಬಗ್ಗೆ ಕಾಳಜಿ ವಹಿಸಿ, ವಾಹನ ಚಲಾಯಿಸಬೇಕು. ಜಾಗೃತಿ ಮೂಡಿಸಲು ಪೊಲೀಸ್ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಗಳಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಎಂ.ಬ್ಯಾಕೋಡ ಹೇಳಿದರು.
ಅವರು ಮಂಗಳವಾರ ಬೆಳಿಗ್ಗೆ ಜಿಲ್ಲಾಡಳಿತ, ಸಾರಿಗೆ ಇಲಾಖೆ, ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ (ಹುಬ್ಬಳ್ಳಿ-ಧಾರವಾಡ), ಮೋಟಾರು ಡ್ರೈವಿಂಗ್ ಅಸೋಸಿಯೇಷನ್, ಧಾರವಾಡ ಜಿಲ್ಲೆಯ ವಾಹನಗಳ ಅಧಿಕೃತ ಮಾರಾಟಗಾರರು ಹಾಗೂ ಕರ್ನಾಟಕ ವಿಶ್ವವಿದ್ಯಾಲಯ, ಎನ್.ಎಸ್.ಎಸ್. ಕೋಶ, ಶಿಕ್ಷಣ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕ ಮತ್ತು ಸರ್ ಸಿದ್ಧಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯದ ಸಹಯೋಗದಲ್ಲಿ ಕೆ.ಸಿ.ಡಿ ವೃತ್ತದಿಂದ ಜುಬಿಲಿ ಸರ್ಕಲ್‌ವರೆಗೆ ಆಯೋಜಿಸಿದ್ದ ಕಾಲ್ನಡಿಗೆ (ವಾಕ್‌ತಾನ್) ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ನಗರದಲ್ಲಿ ಬೇರೆ ರೀತಿಯಾದ ಸನ್ನಿವೇಶ ಹಾಗೂ ಬೇರೆ ಬೇರೆಯಾದ ಪ್ರಕರಣಗಳಲ್ಲಿ ಸಂಭವಿಸುವ ಸಾವಿನ ಸಂಖ್ಯೆಗಳಿಗಿಂತ ಅಪಘಾತದಿಂದ ಮರಣ ಹೊಂದಿರುವವರ ಸಂಖ್ಯೆಯು ಹೆಚ್ಚಾಗಿರುತ್ತದೆ. ಆದ್ದರಿಂದ ರಸ್ತೆಯಲ್ಲಿ ವಾಹನ ಸಂಚಾರ ಮಾಡುವಾಗ ರಸ್ತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಅಪಘಾತಗಳನ್ನು ತಪ್ಪಿಸುವಲ್ಲಿ ಇಲಾಖೆಗಳೊಂದಿಗೆ ಸಾರ್ವಜನಿಕರು ಕೈಜೊಡಿಸಬೇಕೆಂದು ತಿಳಿಸಿದರು.
ಸಂಚಾರಿ ನಿಯಮಗಳನ್ನು ಪಾಲಿಸುವದರಿಂದ ಜೀವ ರಕ್ಷಣೆ ಆಗುತ್ತದೆ, ಇತರರನ್ನು ಅಪಘಾತದಿಂದ ತಪ್ಪಿಸಬಹುದಾಗಿದೆ. ಅಪ್ರಾಪ್ತರಿಗೆ ಪಾಲಕರು ವಾಹನಗಳನ್ನು ಚಲಾಯಿಸಲು ನೀಡಬಾರದು. ಹೆಲ್ಮೆಟ್, ಸೀಟ್ ಬೆಲ್ಟ್ ಧಾರಣೆ ಸೇರಿದಂತೆ ಅಗತ್ಯ ಸುರಕ್ಷಾ ಕ್ರಮಗಳನ್ನು ಅನುಸರಿಸಬೇಕೆಂದು ಅವರು ಹೇಳಿದರು.
ಜಾಥಾ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಕರ್ನಾಟಕ ವಿಶ್ವವಿದ್ಯಾಲಯ ಕುಲಸಚಿವ ಡಾ. ಎ. ಚನ್ನಪ್ಪ, ಉಪ ಸಾರಿಗೆ ಆಯುಕ್ತ ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ನೂರ್ ಮೊಹಮ್ಮದ್ ಬಾಷಾ, ಕೆಸಿಡಿ ಪ್ರಾಚಾರ್ಯ ಡಾ. ಡಿ.ಬಿ. ಕರಡೋಣಿ, ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಎಂ.ಬಿ. ದಳಪತಿ ಉಪಸ್ಥಿತರಿದ್ದರು.
ನಂತರ ಆಲೂರು ವೆಕಟರಾವ್ ಸಾಂಸ್ಕೃತಿಕ ಸಭಾಭವನದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ-2025ರ ಸಮಾರೋಪ ಸಮಾರಂಭ ಜರುಗಿತು. ಸಮಾರಂಭದಲ್ಲಿ ಕ.ವಿ.ವಿ. ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯರ ಡಾ. ಆರ್.ಹೆಚ್. ನಾಯಕ್, ರಾಯಾಪೂರ ಕೆ.ಎಸ್.ಆರ್.ಪಿ, ಸಹಾಯಕ ಕಮಾಂಡೆಂಟ್ ವಿಶ್ವನಾಥ ನಾಯಕ್, ಕ.ವಿ.ವಿ ಶಿಕ್ಷಣ ಮಹಾವಿದ್ಯಾಲಯ ಡಾ. ಸುರೇಶ ಸಮ್ಮಸಗಿ, ಸರ್ ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯ ಪ್ರಾಶುಂಪಾಲರಾದ ಡಾ. ಮಂಜುಳಾ ಎಸ್.ಆರ್. ಮತ್ತು ವಿಶ್ವನಾಥ ನಾಯಕ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ಸಾರಿಗೆ ಕಛೇರಿಯ ಎಸ್.ಡಿ. ಬೆಲ್ಲದ್, ಹಿರಿಯ ಮೋಟಾರು ವಾಹನ ನಿರೀಕ್ಷಕ ಆರ್.ಎಸ್. ಮಾಳಗಿ, ಮಹೇಶ ಮಠಪತಿ, ಎಂ.ಎಫ್. ಬನಹಟ್ಟಿ, ಕಚೇರಿ ಅಧೀಕ್ಷಕರಾದ ಸಂಜೀವ್ ಹೊಂಡೇದ್, ಸಚಿನ್ ಹುಲಕೋಟಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ ಡಾ. ಎ. ಚನ್ನಪ್ಪ ಮಾತನಾಡಿ, ವಿದ್ಯಾರ್ಥಿಗಳು ಹಾಗೂ ಪೋಷಕರು ರಸ್ತೆ ಸುರಕ್ಷತೆಯ ಬಗ್ಗೆ ತಿಳುವಳಿಕೆ ಮೂಡಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಪ್ರಸ್ತುತ ಪ್ರತಿಯೊಂದು ಮನೆಯಲ್ಲಿ ಕಾರ್ ಅಥವಾ ಬೈಕ್ ಇದ್ದು, ಪೋಷಕರು ತಮ್ಮ ಮಕ್ಕಳಿಗೆ ಅಪ್ರಾಪ್ತ ವಯಸ್ಸಿನಲ್ಲಿ ಬೈಕ್ ಚಾಲನೆಗೆ ಪ್ರಚೋದನೆ ನೀಡಿದಲ್ಲಿ ಅಪಘಾತಗಳಾಗುವ ಸಂಭವವಿರುತ್ತದೆ. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ರಸ್ತೆಯ ನಿಯಮಗಳನ್ನು ಪಾಲಿಸಿ ರಸ್ತೆ ಅಪಘಾತಗಳನ್ನು ತಡೆಯುವಲ್ಲಿ ಕಾಳಜಿವಹಿಸಬೇಕೆಂದು ತಿಳಿಸಿದರು.