ವಿಜಯಸಾಕ್ಷಿ ಸುದ್ದಿ, ಗದಗ: ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಗದಗ ಪ್ರಮುಖ ಕೇಂದ್ರವಾಗಿ ರೂಪುಗೊಂಡಿತ್ತು. ಮಹಾತ್ಮ ಗಾಂಧೀಜಿ, ಲೋಕಮಾನ್ಯ ತಿಲಕರು ಹಾಗೂ ಜವಾಹರಲಾಲ್ ನೆಹರು ಸೇರಿದಂತೆ ಹಲವು ರಾಷ್ಟ್ರೀಯ ನಾಯಕರು ಗದಗಕ್ಕೆ ಭೇಟಿ ನೀಡುವ ಮೂಲಕ ಸ್ವಾತಂತ್ರ್ಯದ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಿದ್ದರು. ಜಿಲ್ಲೆಯ ಸಾಮಾನ್ಯ ಜನರೂ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮದೇ ಆದ ಕೊಡುಗೆ ನೀಡಿರುವುದು ಮಹತ್ವದ ಸಂಗತಿ ಎಂದು ಸಾಮಾಜಿಕ ಕಾರ್ಯಕರ್ತೆ ರಾಜೇಶ್ವರಿ ಬಡ್ನಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತ್ಯಾಗ ಹಾಗೂ ಬಲಿದಾನಗಳ ಹಿನ್ನೆಲೆಯಲ್ಲಿ ದೊರೆತ ಸ್ವಾತಂತ್ರ್ಯವನ್ನು ಸದುಪಯೋಗಪಡಿಸಿಕೊಂಡು ದೇಶದ ಏಳ್ಗೆಗೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.
ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ಸ್ವಾತಂತ್ರ್ಯ ಚಳವಳಿಗೆ ರೋಣ ಭಾಗದ ಜನರು ಹೆಚ್ಚಿನ ಕೊಡುಗೆ ನೀಡಿದ್ದಾರೆ. ಪ್ರಬಲ ಮಾಧ್ಯಮಗಳಿಲ್ಲದ ಆ ಕಾಲದಲ್ಲಿ ಗಾಂಧೀಜಿಯವರ ಒಂದು ಕರೆ ದೇಶದ ಜನರನ್ನು ಜಾಗೃತಗೊಳಿಸುವ ಶಕ್ತಿ ಹೊಂದಿತ್ತು. ಸ್ವಾತಂತ್ರ್ಯ ಚಳವಳಿ, ಕರ್ನಾಟಕ ಏಕೀಕರಣ ಚಳವಳಿ ಹಾಗೂ ಹೈದರಾಬಾದ್ ವಿಮೋಚನಾ ಚಳವಳಿಯ ಮಹತ್ವ, ಸಂಕಷ್ಟ ಮತ್ತು ನೋವುಗಳನ್ನು ಇಂದಿನ ಪೀಳಿಗೆಗೆ ತಿಳಿಸುವ ಕಾರ್ಯವಾಗಬೇಕು ಎಂದರು.
ಮುಖ್ಯ ಅತಿಥಿ ರುದ್ರಣ್ಣ ಗುಳಗುಳಿ ಮಾತನಾಡಿ, ಸಮಾಜದ ಎಲ್ಲ ವರ್ಗಗಳ ಜನರು ಒಗ್ಗಟ್ಟಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಮೈಲಾರ ಮಹಾದೇವರ ಅಪ್ರತಿಮ ಹೋರಾಟಗಳು ಬ್ರಿಟಿಷರ ನಿದ್ದೆಗೆಡಿಸಿದ್ದವು. ಇಂತಹ ಹೋರಾಟಗಾರರ ತ್ಯಾಗ, ಬಲಿದಾನ ಹಾಗೂ ಹೋರಾಟದ ಕಥನಗಳು ಮುಂದಿನ ಪೀಳಿಗೆಗೆ ತಲುಪಬೇಕು ಎಂದರು.
ಬಸವರಾಜ ಬಿಂಗಿ ಮಾತನಾಡಿ, ಇಂದಿನ ಯುವಜನಾಂಗದಲ್ಲಿ ದೇಶಾಭಿಮಾನದ ಭಾವನೆ ಕ್ಷೀಣಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟದ ಇತಿಹಾಸ ಹಾಗೂ ಹೋರಾಟಗಾರರ ತ್ಯಾಗದ ಕಥನಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವುದು ಇಂದಿನ ಅಗತ್ಯವಾಗಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾತಂತ್ರ್ಯ ಚಳವಳಿಯಲ್ಲಿ ಸಾಮಾನ್ಯ ಜನರು ಹಾಗೂ ಮಹಿಳೆಯರು ತಮ್ಮದೇ ಆದ ಮಹತ್ವದ ಕೊಡುಗೆ ನೀಡಿದ್ದಾರೆ. ಹೋರಾಟಗಾರರಿಗೆ ಅನ್ನ, ಆಶ್ರಯ ನೀಡುವ ಮೂಲಕ ದೇಶಪ್ರೇಮ ಮೆರೆದಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪರ ಚಳವಳಿಗಳು ನಿರಂತರವಾಗಿರಬೇಕು. ಕಾಲಕ್ಕೆ ತಕ್ಕಂತೆ ಸಮಾಜದಲ್ಲಿ ಉಂಟಾಗುವ ಅಸಮಾನತೆಗಳನ್ನು ಪ್ರಶ್ನಿಸುವ ಮನೋಭಾವವನ್ನು ಯುವಕರು ಬೆಳೆಸಿಕೊಳ್ಳಬೇಕು. ಚಲನಶೀಲ ಸಮಾಜಕ್ಕೆ ಇದು ಅತ್ಯಂತ ಅಗತ್ಯವಾಗಿದೆ ಎಂದರು.
ಷಣ್ಮುಖಪ್ಪ ಬಡ್ನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಹುಲ ಗಿಡ್ನಂದಿ ನಿರೂಪಿಸಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಸತೀಶಕುಮಾರ ಚನ್ನಪ್ಪಗೌಡರ ವಂದಿಸಿದರು.
ಕಾರ್ಯಕ್ರಮದಲ್ಲಿ ಸುಧಾ ಬಳ್ಳಿ, ರತ್ನಾ ಪುರಂತರ, ಪ್ರೇಮಾ ಬಡ್ನಿ, ಶೈಲಜಾ ಗಿಡ್ನಂದಿ, ಮಲ್ಲಿಕಾರ್ಜುನ ನಿಂಗೋಜಿ, ಗಂಗಾಧರ ಹಕಾರಿ, ಎಚ್.ಎನ್. ಕಾಳೆ, ಬಿ.ಬಿ. ಹೊಳಗುಂದಿ, ಶರಣಪ್ಪ ಹೊಸಂಗಡಿ, ರವಿ ದೇವರಡ್ಡಿ, ಸಾಕ್ಷಿ ದೇವರಡ್ಡಿ, ಕೆ.ಎಸ್. ಗುಗ್ಗರಿ, ಎಂ.ಎಫ್. ಡೋಣಿ, ಪ್ರ.ತೋ. ನಾರಾಯಣಪೂರ, ಪ್ರವೀಣಕುಮಾರ ಬಾವಿ, ಅಶೋಕ ಹಾದಿ, ಎಸ್.ಡಿ. ಗಾಂಜಿ, ಮುಕ್ತಾ ಉಡುಪಿ, ಡಾ. ಜಿ.ಬಿ. ಪಾಟೀಲ, ಎಸ್.ಎಲ್. ಕುಲಕರ್ಣಿ, ಕೆ.ಜೆ. ಮುಲ್ಲಾ, ಚಂದ್ರಕಲಾ ಇಟಗಿಮಠ, ಪುಷ್ಪಾ ನಿಡಗುಂದಿ, ಜೆ.ಎ. ಪಾಟೀಲ, ಅನ್ನದಾನಿ ಹಿರೇಮಠ, ಮಂಜುಳಾ ವೆಂಕಟೇಶಯ್ಯ, ಯು.ಎಸ್. ಕಣವಿ, ರಾಜೇಂದ್ರ ಗಡಾದ, ರೇವಯ್ಯ ಹಿರೇಮಠ, ವಿ.ಎಸ್. ದಲಾಲಿ, ರವೀಂದ್ರ ಜೋಶಿ, ಎಸ್.ಯು. ಸಜ್ಜನಶೆಟ್ಟರ, ಸಿ.ಎಂ. ಮಾರನಬಸರಿ, ಷಡಕ್ಷರಿ ಮೆಣಸಿನಕಾಯಿ, ರಾಮಕೃಷ್ಣ ಪವಾರ, ಪರಶುರಾಮ ಖಟವಟೆ, ವೈ.ಎಸ್. ಪಾಟೀಲ, ಮಹದೇವ ಕುಲಕರ್ಣಿ, ಕಿರಣ ಗುಗ್ಗರಿ, ಶಿವಶಂಕರ ಗದ್ದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಸ್ವಾತಂತ್ರ್ಯ ಚಳವಳಿಯಲ್ಲಿ ಸಾಮಾನ್ಯ ಜನರು ಹಾಗೂ ಮಹಿಳೆಯರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅನ್ನ, ಆಶ್ರಯ ನೀಡುವ ಮೂಲಕ ದೇಶಪ್ರೇಮ ಮೆರೆದಿದ್ದಾರೆ. ಇಂದಿನ ಯುವಕರು ಸಮಾಜದಲ್ಲಿನ ಅಸಮಾನತೆಗಳನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಚಲನಶೀಲ ಸಮಾಜಕ್ಕೆ ಇಂತಹ ಮನೋಭಾವ ಅತ್ಯಂತ ಅಗತ್ಯ.”
— ವಿವೇಕಾನಂದಗೌಡ ಪಾಟೀಲ, ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು



