ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ವೇಳೆ ಪತ್ತೆಯಾದ ಜಿಲೆಟಿನ್ ಕಡ್ಡಿ ಮತ್ತು ಟೈಮರ್ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಾಂಬ್ ಬೆದರಿಕೆ ಕರೆ ಮಾಡಿದ ವ್ಯಕ್ತಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು, ಆತನ ವಿಚಾರಣೆ ನಡೆಯುತ್ತಿದೆ. ಇದೇ ವೇಳೆ ಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ಪತ್ತೆಯಾದ ಜಿಲೆಟಿನ್ ಕಡ್ಡಿ ಸೇರಿದಂತೆ ಎಲ್ಲಾ ಅನುಮಾನಾಸ್ಪದ ವಸ್ತುಗಳ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಈ ಪ್ರಕರಣದ ತನಿಖೆ ನಡೆಸಲು ಎನ್‌ಐಎ ಸಹ ಮನವಿ ಮಾಡಿದೆ. ಹೀಗಾಗಿ ತನಿಖೆಗೆ ಅವರಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದ ಪರಮೇಶ್ವರ್, ಪ್ರಧಾನಿ ಭೇಟಿ ಕಾರ್ಯಕ್ರಮಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಭದ್ರತಾ ವ್ಯವಸ್ಥೆಗಳು ಈಗಾಗಲೇ ಜಾರಿಯಲ್ಲಿದ್ದವು ಎಂದರು.
ಕಾರ್ಯಕ್ರಮ ಆರಂಭಕ್ಕೂ ಸುಮಾರು ಎರಡು ಗಂಟೆಗಳ ಮುನ್ನ, ಅಂದರೆ ಬೆಳಗ್ಗೆ 9 ಗಂಟೆ ಸುಮಾರಿಗೆ ಜಿಲೆಟಿನ್ ಕಡ್ಡಿ ಪತ್ತೆಯಾಗಿರುವುದು ಭದ್ರತಾ ಸಿಬ್ಬಂದಿಯ ಎಚ್ಚರಿಕೆಯನ್ನು ತೋರಿಸುತ್ತದೆ. ಇದು ಒಳ್ಳೆಯ ಬೆಳವಣಿಗೆ. ಆದರೆ ಈ ಘಟನೆಗೆ ಭಯೋತ್ಪಾದನಾ ಸಂಘಟನೆಗಳ ಸಂಪರ್ಕವಿದೆಯೇ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ತನಿಖೆ ಪೂರ್ಣಗೊಂಡ ಬಳಿಕವೇ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹೇಳಿದರು.
ಇದೇ ವೇಳೆ ಶೃಂಗೇರಿ ಕ್ಷೇತ್ರದ ಮರು ಮತ ಎಣಿಕೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ನ್ಯಾಯಾಲಯದ ಅಂತಿಮ ತೀರ್ಪನ್ನು ಕಾದು ನೋಡಬೇಕಿದೆ ಎಂದರು. ಮರು ಎಣಿಕೆಯಲ್ಲಿ 250ಕ್ಕೂ ಹೆಚ್ಚು ಮತಗಳ ವ್ಯತ್ಯಾಸ ಕಂಡುಬಂದಿರುವುದು ಮೊದಲ ಎಣಿಕೆ ಪ್ರಕ್ರಿಯೆಯಲ್ಲಿ ಲೋಪವಾಗಿರುವ ಸಾಧ್ಯತೆಯನ್ನು ಸೂಚಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಮತ ಎಣಿಕೆಯಲ್ಲಿ ಅಕ್ರಮ ಅಥವಾ ತಾಂತ್ರಿಕ ದೋಷಗಳ ಬಗ್ಗೆ ದಾಖಲಾಗಿರುವ ದೂರಿನ ತನಿಖೆಯನ್ನು ರಾಜ್ಯ ಪೊಲೀಸರು ನಡೆಸುತ್ತಿದ್ದು, ವಿಧಿವಿಜ್ಞಾನ ಪ್ರಯೋಗಾಲಯದಲ್ಲಿಯೂ ಪರಿಶೀಲನೆ ನಡೆಯಲಿದೆ ಎಂದು ಗೃಹ ಸಚಿವರು ಮಾಹಿತಿ ನೀಡಿದರು.



