ವಿಜಯಸಾಕ್ಷಿ ಸುದ್ದಿ, ಗದಗ: ಗದಗ ನಗರದ ಅಭಿವೃದ್ಧಿ, ಮೂಲಸೌಕರ್ಯ ಸಮಸ್ಯೆಗಳು ಹಾಗೂ ಗ್ರಾಮೀಣ ಭಾಗಗಳ ಸಮಸ್ಯೆಗಳನ್ನು ಜನಪ್ರತಿನಿಧಿಗಳು ಮತ್ತು ಆಡಳಿತದ ಗಮನಕ್ಕೆ ತರುವ ಉದ್ದೇಶದಿಂದ GEN Z Voters & Citizens Forum ಹೊಸ ಮಾದರಿಯ ಜನಜಾಗೃತಿ ಅಭಿಯಾನಕ್ಕೆ ಮುಂದಾಗಿದೆ.
ನಗರದ ಪ್ರತಿಯೊಂದು ರಸ್ತೆ, ಬಡಾವಣೆ, ವಾರ್ಡ್ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ GEN Z ಯುವಕರು ‘ಅಭಿವೃದ್ಧಿಯ ಸೈನಿಕರು’ ಆಗಿ ಕಾರ್ಯನಿರ್ವಹಿಸಲಿದ್ದು, ಪ್ರತಿ ತಂಡವನ್ನು ಮುನ್ನಡೆಸುವ ಯುವ ನಾಯಕರು ‘ಟೀಮ್ ಲೀಡರ್ ಕಮಾಂಡೋ’ಗಳಾಗಿ ಜವಾಬ್ದಾರಿ ವಹಿಸಲಿದ್ದಾರೆ.
ಹಾಳಾದ ರಸ್ತೆಗಳು, ಅವ್ಯವಸ್ಥೆಯ ಚರಂಡಿಗಳು, ಕುಡಿಯುವ ನೀರಿನ ಸಮಸ್ಯೆ, ಕಸದ ರಾಶಿ, ಬೀದಿ ದೀಪಗಳ ಕೊರತೆ, ಅಪೂರ್ಣ ಕಾಮಗಾರಿಗಳು ಹಾಗೂ ಸಾರ್ವಜನಿಕ ಸೌಲಭ್ಯಗಳ ಕೊರತೆ ಸೇರಿದಂತೆ ಗ್ರಾಮೀಣ ಪ್ರದೇಶಗಳ ಮೂಲಸೌಕರ್ಯ ಸಮಸ್ಯೆಗಳನ್ನು ಯುವಕರು ಫೋಟೊ ಮತ್ತು ವಿಡಿಯೊಗಳ ಮೂಲಕ ಸ್ಥಳ ಹಾಗೂ ದಿನಾಂಕದೊಂದಿಗೆ ದಾಖಲಿಸಲಿದ್ದಾರೆ. ಈ ದಾಖಲೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜನರ ಗಮನಕ್ಕೆ ತರುವುದರ ಜತೆಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳ ಗಮನಕ್ಕೂ ತರಲಾಗುವುದು.
ಆರೋಪಕ್ಕಾಗಿ ಅಲ್ಲ — ಪರಿಹಾರಕ್ಕಾಗಿ ದಾಖಲೆ
ಅಭಿಯಾನವು ಯಾವುದೇ ವ್ಯಕ್ತಿಯ ವಿರುದ್ಧ ವೈಯಕ್ತಿಕ ದಾಳಿ ಮಾಡುವ ಉದ್ದೇಶ ಹೊಂದಿಲ್ಲ. ಗದಗದ ಅಭಿವೃದ್ಧಿಯಲ್ಲಿ ಎಲ್ಲಿ ಕೊರತೆಯಿದೆ, ಜನರು ಎದುರಿಸುತ್ತಿರುವ ಸಮಸ್ಯೆಗಳೇನು ಹಾಗೂ ಇನ್ನೂ ಆಗಬೇಕಿರುವ ಕೆಲಸಗಳೇನು ಎಂಬುದನ್ನು ಸಾಕ್ಷ್ಯಾಧಾರಗಳೊಂದಿಗೆ ಜನರ ಮುಂದಿಡುವುದು ಇದರ ಉದ್ದೇಶವಾಗಿದೆ.
“ನಮ್ಮ ಹೋರಾಟ ವ್ಯಕ್ತಿಯ ವಿರುದ್ಧವಲ್ಲ; ಅಭಿವೃದ್ಧಿಯ ಕೊರತೆಯ ವಿರುದ್ಧ. ನಮ್ಮ ಗುರಿ ರಾಜಕೀಯ ದ್ವೇಷವಲ್ಲ; ಗದಗದ ಅಭಿವೃದ್ಧಿ.”
ಜನಪ್ರತಿನಿಧಿಗಳು ಜನರಿಂದ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ನಗರದ ರಸ್ತೆ, ಕುಡಿಯುವ ನೀರು, ಚರಂಡಿ, ಸ್ವಚ್ಛತೆ, ಉದ್ಯೋಗ ಹಾಗೂ ಮೂಲಸೌಕರ್ಯಗಳ ಕುರಿತು ಪ್ರಶ್ನಿಸುವುದು ನಾಗರಿಕರ ಪ್ರಜಾಸತ್ತಾತ್ಮಕ ಹಕ್ಕು ಎಂದು Forum ತಿಳಿಸಿದೆ. ಉತ್ತಮ ಕೆಲಸಗಳು ನಡೆದಿದ್ದರೆ ಅವುಗಳನ್ನೂ ಗುರುತಿಸುವ ಜವಾಬ್ದಾರಿಯುತ ಜನಜಾಗೃತಿ ಅಭಿಯಾನ ಇದಾಗಲಿದೆ.
ಪ್ರತಿ ವಾರ್ಡ್ಗೆ GEN Z ತಂಡ
ಪ್ರತಿಯೊಂದು ವಾರ್ಡ್ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಯುವಕರ ತಂಡಗಳನ್ನು ರಚಿಸಲಾಗುವುದು. ತಂಡದ ನಾಯಕರ ನೇತೃತ್ವದಲ್ಲಿ ತಮ್ಮ ಪ್ರದೇಶದ ಸಮಸ್ಯೆಗಳನ್ನು ಗುರುತಿಸಿ ದಾಖಲಿಸಲಾಗುತ್ತದೆ.
ಒಂದು ರಸ್ತೆ — ಒಂದು ಜವಾಬ್ದಾರಿ.
ಒಂದು ವಾರ್ಡ್ — ಒಂದು ಬಲಿಷ್ಠ GEN Z ತಂಡ.
ಒಂದು ಸಮಸ್ಯೆ — ಒಂದು ದಾಖಲೆ.
ದಾಖಲೆಯಿಂದ ಪ್ರಶ್ನೆ, ಪ್ರಶ್ನೆಯಿಂದ ಉತ್ತರ, ಉತ್ತರದಿಂದ ಅಭಿವೃದ್ಧಿ ಎಂಬ ಆಶಯದೊಂದಿಗೆ ಯುವಕರು ಕೇವಲ ಮತದಾರರಾಗಿ ಉಳಿಯದೆ, ತಮ್ಮ ನಗರದ ಅಭಿವೃದ್ಧಿಯನ್ನು ಗಮನಿಸುವ ಜಾಗೃತ ನಾಗರಿಕರಾಗಿ ಮುಂದೆ ಬರಬೇಕು ಎಂದು GEN Z Voters & Citizens Forum ಆಶಿಸಿದೆ.
— GEN Z Voters & Citizens Forum



