ಕಲಬುರಗಿ: ಜಿಲ್ಲೆಯ ಗುರುತಾಗಿರುವ ‘ಕಲಬುರಗಿ ರೊಟ್ಟಿ’ ಈಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಮಹಿಳಾ ಸ್ವಸಹಾಯ ಸಂಘಗಳ ಮೂಲಕ ತಯಾರಾಗುತ್ತಿರುವ ರೊಟ್ಟಿಗಳನ್ನು ಅಮೆರಿಕ, ಕೆನಡಾ ಮತ್ತು ಆಸ್ಟ್ರೇಲಿಯಾಕ್ಕೆ ರಫ್ತು ಮಾಡುವ ಮಹತ್ವಾಕಾಂಕ್ಷಿ ಯೋಜನೆಗೆ ಅಧಿಕೃತ ಚಾಲನೆ ನೀಡಲಾಗಿದೆ.
ಅಮೆರಿಕ ಹಾಗೂ ಆಸ್ಟ್ರೇಲಿಯಾಕ್ಕೆ ಪ್ರತಿ ತಿಂಗಳು ತಲಾ 10,000 ರೊಟ್ಟಿಗಳು ಹಾಗೂ ಕೆನಡಾಕ್ಕೆ 5,000 ರೊಟ್ಟಿಗಳನ್ನು ರಫ್ತು ಮಾಡುವ ಗುರಿ ಹೊಂದಲಾಗಿದೆ. ಈ ಬೆಳವಣಿಗೆ ಕಲಬುರಗಿಯ ಸಾಂಪ್ರದಾಯಿಕ ಆಹಾರಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟಂತಾಗಿದೆ.
ಸಚಿವ ಪ್ರಿಯಾಂಕ ಖರ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಯೋಜನೆ ಕುರಿತು ಮಾಹಿತಿ ಹಂಚಿಕೊಂಡಿದ್ದು, ಮಹಿಳಾ ಸ್ವಸಹಾಯ ಸಂಘಗಳ ಪರಿಶ್ರಮವನ್ನು ಶ್ಲಾಘಿಸಿದ್ದಾರೆ.
ಜಿಲ್ಲೆಯ 100ಕ್ಕೂ ಹೆಚ್ಚು ಸ್ವಸಹಾಯ ಸಂಘಗಳ ಸುಮಾರು 1,000 ಮಹಿಳೆಯರು ಈ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸರ್ಕಾರ ಕಳೆದ ಎರಡು ವರ್ಷಗಳಲ್ಲಿ 150ಕ್ಕೂ ಹೆಚ್ಚು ರೊಟ್ಟಿ ತಯಾರಿಕಾ ಯಂತ್ರಗಳನ್ನು ಸಬ್ಸಿಡಿ ದರದಲ್ಲಿ ವಿತರಿಸಿದ್ದು, ಗ್ರಾಮೀಣ ಮಹಿಳೆಯರ ಜೀವನೋಪಾಯಕ್ಕೆ ದೊಡ್ಡ ಆಸರೆಯಾಗಿದೆ.
ಪ್ಯಾಕೇಜಿಂಗ್, ಲೇಬಲಿಂಗ್ ಮತ್ತು ಬ್ರ್ಯಾಂಡಿಂಗ್‌ಗೆ ಅಂತರರಾಷ್ಟ್ರೀಯ ಮಟ್ಟದ ಗುಣಮಟ್ಟ ಅಳವಡಿಸಲಾಗಿದ್ದು, ಕಲಬುರಗಿ ರೊಟ್ಟಿ ಈಗ ಸ್ವಿಗ್ಗಿ, ಜೊಮ್ಯಾಟೊ ಮತ್ತು ಅಮೆಜಾನ್ ಮೂಲಕವೂ ಗ್ರಾಹಕರಿಗೆ ಲಭ್ಯವಾಗುತ್ತಿದೆ. ಸ್ಥಳೀಯ ಸಾಂಪ್ರದಾಯಿಕ ಆಹಾರ ಜಾಗತಿಕ ಮಾರುಕಟ್ಟೆ ತಲುಪಿರುವುದು ಜಿಲ್ಲೆಯ ಮಹಿಳಾ ಉದ್ಯಮಶೀಲತೆಗೆ ಹೊಸ ಅಧ್ಯಾಯ ಬರೆದಂತಾಗಿದೆ.



