ತುಮಕೂರು: ಇಲ್ಲಿನ ಪ್ರತಿಷ್ಠಿತ ಜ್ಯುವೆಲ್ಲರಿ ಅಂಗಡಿಯಲ್ಲಿ ನಡೆದಿದ್ದ ₹10 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ವಜ್ರಾಭರಣ ನಾಪತ್ತೆ ಪ್ರಕರಣ ಸಿನಿಮಾವನ್ನೇ ಮೀರಿಸುವ ತಿರುವು ಪಡೆದುಕೊಂಡಿದೆ. ಶಟರ್ ಒಡೆದಿಲ್ಲ, ಕಳ್ಳನ ಸುಳಿವಿಲ್ಲ ಎನ್ನುವ ಗೊಂದಲದ ನಡುವೆ ಸಿಸಿಟಿವಿ ಪರಿಶೀಲಿಸಿದಾಗ, ಆಭರಣಗಳನ್ನು ಎಗರಿಸಿದ್ದು ಕಳ್ಳನಲ್ಲ, ಇಲಿ ಎಂಬ ಅಚ್ಚರಿಯ ಸತ್ಯ ಬೆಳಕಿಗೆ ಬಂದಿದೆ.
ನಗರದ ಕಾಲ್‌ಟೆಕ್ಸ್ ಸರ್ಕಲ್ ಸಮೀಪದ ವಿಶ್ವಾಸ್ ಜ್ಯುವೆಲ್ಲರಿಯಲ್ಲಿ ಬೆಳಗ್ಗೆ ಅಂಗಡಿ ತೆರೆದಾಗ 50 ಗ್ರಾಂಗೂ ಅಧಿಕ ತೂಕದ ಚಿನ್ನ ಹಾಗೂ ವಜ್ರಾಭರಣಗಳು ಕಾಣೆಯಾಗಿದ್ದವು. ಸರಗಳು, ಉಂಗುರಗಳು ಸೇರಿ ಸುಮಾರು ₹10 ಲಕ್ಷ ಮೌಲ್ಯದ ಆಭರಣಗಳು ನಾಪತ್ತೆಯಾಗಿದ್ದರಿಂದ ಸಿಬ್ಬಂದಿ ಕಳ್ಳತನದ ಶಂಕೆ ವ್ಯಕ್ತಪಡಿಸಿದ್ದರು.
ಪೊಲೀಸರಿಗೆ ದೂರು ನೀಡುವ ಮುನ್ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಅಂಗಡಿಯೊಳಗೆ ಓಡಾಡುತ್ತಿದ್ದ ಇಲಿ ಒಂದೊಂದೇ ಆಭರಣವನ್ನು ಎಳೆದುಕೊಂಡು ಹೋಗುತ್ತಿರುವ ದೃಶ್ಯ ಸ್ಪಷ್ಟವಾಗಿ ದಾಖಲಾಗಿತ್ತು. ಬಳಿಕ ಸಿಬ್ಬಂದಿ ಇಲಿಯ ಚಲನವಲನವನ್ನು ಗಮನಿಸಿ ಅದು ಸೇರಿದ್ದ ಬಿಲವನ್ನು ಪತ್ತೆಹಚ್ಚಿದರು.
ಬಿಲವನ್ನು ತೋಡಿದಾಗ 10 ಉಂಗುರಗಳು ಹಾಗೂ 3 ಸರಗಳು ಸೇರಿದಂತೆ ನಾಪತ್ತೆಯಾಗಿದ್ದ ಬಹುತೇಕ ಆಭರಣಗಳು ಸುರಕ್ಷಿತವಾಗಿ ಪತ್ತೆಯಾಗಿವೆ. ಈ ಅಚ್ಚರಿಯ ಘಟನೆಯಿಂದ ಮಾಲೀಕರು ಹಾಗೂ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದು, ಸಿಸಿಟಿವಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.



