ತುಮಕೂರು: ಪಾವಗಡದಲ್ಲಿ ನಕಲಿ ನಕ್ಸಲ್ ಹೆಸರಿನಲ್ಲಿ ಮತ್ತೊಂದು ಬೆದರಿಕೆ ಪ್ರಕರಣ ಬೆಳಕಿಗೆ ಬಂದಿದೆ. ಕನಕಲ ಬಂಡೆ ವೆಂಕಟೇಶ್ ಎಂಬಾತ ರೈತರ ಪಂಪ್ಸೆಟ್ಗೆ ಬಾಂಬ್ ಇಟ್ಟು ಸ್ಫೋಟಿಸಿದ್ದಾನೆ ಎನ್ನಲಾದ ಪ್ರಕರಣದ ಬೆನ್ನಲ್ಲೇ, ಇದೀಗ ಗಂಗಸಾಗರದ ಮುತ್ತವ್ವ ಭೂಷಪ್ಪ ಅವರ ತೋಟದ ಶೆಡ್ಗೆ ಬೆದರಿಕೆ ಪತ್ರ ಅಂಟಿಸಿ ₹5 ಲಕ್ಷ ಹಣಕ್ಕೆ ಬೇಡಿಕೆ ಇಡಲಾಗಿದೆ ಎನ್ನಲಾಗಿದೆ.
ಸಿಪಿಐ(ಎಂಎಲ್), ಸಿಪಿಎಂ ಪೀಪಲ್ ವಾರ್ ಜನಶಕ್ತಿ ಪಾರ್ಟಿ ಹೆಸರಿನಲ್ಲಿ ತೆಲುಗಿನಲ್ಲಿ ಪತ್ರ ಬರೆಯಲಾಗಿದ್ದು, ಸೆಪ್ಟೆಂಬರ್ 16ರೊಳಗೆ ₹5 ಲಕ್ಷ ಹಣ ನೀಡುವಂತೆ ಸೂಚಿಸಲಾಗಿದೆ ಎನ್ನಲಾಗಿದೆ. ವಕೀಲ ಸುಬ್ಬರಾಯಪ್ಪ ಅವರ ಬಳಿ ಹಣ ಕಳುಹಿಸಿ, ನಂತರ ಅದನ್ನು ಕ್ರಾಮೆಡ್ ದೇವಣ್ಣ ದಳಂಗೆ ನೀಡಬೇಕು ಎಂದು ಪತ್ರದಲ್ಲಿ ಬರೆಯಲಾಗಿದೆ ಎಂದು ತಿಳಿದುಬಂದಿದೆ.
ಕನಕಲ ಬಂಡೆ ವೆಂಕಟೇಶ್ ವಿರುದ್ಧ ಹಲವು ಪ್ರಕರಣಗಳಿದ್ದು, ಅವುಗಳ ಕಾನೂನು ಹೋರಾಟಕ್ಕೆ ಹಣದ ಅಗತ್ಯವಿದೆ ಎಂದು ಬೆದರಿಕೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಈ ಪತ್ರವನ್ನು ಯಾರು ಅಂಟಿಸಿದ್ದಾರೆ ಮತ್ತು ನಿಜವಾಗಿಯೂ ನಕ್ಸಲ್ ಸಂಘಟನೆಗಳಿಗೂ ಇದಕ್ಕೂ ಯಾವುದೇ ಸಂಬಂಧವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತೋಟದ ಶೆಡ್ ಬಾಗಿಲಿಗೆ ಬೆದರಿಕೆ ಪತ್ರ ಸಿಕ್ಕ ಹಿನ್ನೆಲೆಯಲ್ಲಿ ಮುತ್ತವ್ವ ಭೂಷಪ್ಪ ಅವರ ಕುಟುಂಬ ಪಾವಗಡ ಪೊಲೀಸರಿಗೆ ದೂರು ನೀಡಿದೆ. ಪೊಲೀಸರು ಪತ್ರವನ್ನು ಪರಿಶೀಲಿಸಿ, ಪ್ರಕರಣದ ವಿವಿಧ ಆಯಾಮಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.
ರಾಜ್ಯದಲ್ಲಿ ನಕ್ಸಲರು ಶರಣಾದ ಬಳಿಕ ಕರ್ನಾಟಕ ನಕ್ಸಲ್ ಮುಕ್ತ ರಾಜ್ಯವಾಗಿದೆ ಎಂದು ಸರ್ಕಾರ ಹೇಳಿಕೊಂಡಿದ್ದರೂ, ಪಾವಗಡದಲ್ಲಿ ನಕಲಿ ನಕ್ಸಲ್ ಹೆಸರಿನಲ್ಲಿ ಹಣಕ್ಕೆ ಬೇಡಿಕೆ ಹಾಗೂ ಬೆದರಿಕೆ ಪ್ರಕರಣಗಳು ಮುಂದುವರಿದಿರುವುದು ಆತಂಕಕ್ಕೆ ಕಾರಣವಾಗಿದೆ.



