ದಕ್ಷಿಣ ಕನ್ನಡ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರ ದರ್ಶನ ಸಮಯವನ್ನು ವಿಸ್ತರಿಸಲಾಗಿದ್ದು, ಭಕ್ತರಿಗೆ ಇದೀಗ ಮಧ್ಯಾಹ್ನ ಹೆಚ್ಚುವರಿ ಒಂದು ಗಂಟೆ ದರ್ಶನದ ಅವಕಾಶ ಸಿಗಲಿದೆ. ದೇವಸ್ಥಾನದ ಆಡಳಿತ ಮಂಡಳಿ ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
ಈವರೆಗೆ ಮಧ್ಯಾಹ್ನ 1.30ರಿಂದ 3.30ರವರೆಗೆ ದೇವರ ದರ್ಶನ ಸಂಪೂರ್ಣ ಬಂದ್ ಮಾಡಲಾಗುತ್ತಿತ್ತು. ಆದರೆ ಹೊಸ ವೇಳಾಪಟ್ಟಿಯ ಪ್ರಕಾರ ಇನ್ನು ಮುಂದೆ ಮಧ್ಯಾಹ್ನ 2.00ರಿಂದ 3.00ರವರೆಗೆ ಮಾತ್ರ ದರ್ಶನ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ.
ಇದರಿಂದ ಪ್ರತಿದಿನ ಬೆಳಗ್ಗೆ 6.30ರಿಂದ ಮಧ್ಯಾಹ್ನ 2.00ರವರೆಗೆ ಮತ್ತು ಮಧ್ಯಾಹ್ನ 3.00ರಿಂದ ರಾತ್ರಿ 8.30ರವರೆಗೆ ಭಕ್ತರು ದೇವರ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಪ್ರತಿದಿನ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಸರ್ಪಸಂಸ್ಕಾರ, ಆಶ್ಲೇಷ ಬಲಿ ಸೇರಿದಂತೆ ವಿವಿಧ ಸೇವೆಗಳಿಗೆ ಹೆಚ್ಚುತ್ತಿರುವ ಭಕ್ತರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್. ಇಂಜಾಡಿ ಮಾಹಿತಿ ನೀಡಿ, ಭಕ್ತರಿಗೆ ಅನುಕೂಲವಾಗುವ ಉದ್ದೇಶದಿಂದ ದರ್ಶನ ಸಮಯ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ. ಮಹಾಪೂಜೆ ಸಮಯದಲ್ಲಿ ಮಾತ್ರ ಹಿಂದಿನಂತೆ ಅಲ್ಪಾವಧಿಗೆ ದರ್ಶನ ಸ್ಥಗಿತಗೊಳ್ಳಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.



