ಬೆಂಗಳೂರು: ದಲಿತರ ಪರ, ಸಂವಿಧಾನದ ಪರ ಮತ್ತು ಡಾ. ಅಂಬೇಡ್ಕರರ ಪರ ಎನ್ನುವ ಕಾಂಗ್ರೆಸ್ಸಿನವರು ಈಗ ಮೀಸಲಾತಿ ವಿಚಾರದಲ್ಲಿ ಈ ಮೂರಕ್ಕೂ ಎಳ್ಳುನೀರು ಬಿಟ್ಟಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದ್ದಾರೆ.
ಹೆಚ್ಚುವರಿ ಮೀಸಲಾತಿ ಪ್ರಮಾಣವನ್ನು ಕಾಂಗ್ರೆಸ್ ಸರಕಾರ ತಡೆಹಿಡಿದಿದೆ. ಇದಕ್ಕೆ 9ನೇ ಶೆಡ್ಯೂಲ್ ಕಾರಣವಲ್ಲ; ಸರಿಯಾಗಿ ವಾದ ಮಂಡಿಸದೇ ಇದ್ದುದೇ ಇದಕ್ಕೆ ಕಾರಣ ಎಂದು ಟೀಕಿಸಿದ್ದಾರೆ. ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,
ಬಸವರಾಜ ಬೊಮ್ಮಾಯಿ ಅವರ ಬಿಜೆಪಿ ಸರಕಾರ ಇದ್ದಾಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಬಹುದಿನಗಳ ಹೋರಾಟಕ್ಕೆ ತೆರೆ ಎಳೆಯಲು ಎಸ್‍ಸಿ, ಎಸ್‍ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿದ್ದರು ಎಂದು ತಿಳಿಸಿದರು. ಈ ಏರಿಕೆಯ ಬಳಿಕ ಸುಮಾರು ಮೂರೂವರೆ ವರ್ಷಗಳ ಕಾಲ ಯಾವ ತೊಂದರೆ, ತೊಡಕೂ ಇಲ್ಲದೇ ಎಲ್ಲ ರೀತಿಯ ಸವಲತ್ತುಗಳೂ ಈ ಜನಾಂಗಕ್ಕೆ ಲಭಿಸಿವೆ ಎಂದು ಹೇಳಿದರು.
ಮೀಸಲಾತಿ ಪ್ರಮಾಣವನ್ನು ಕೂಡಲೇ ಹೆಚ್ಚಿಸಬೇಕೆಂದು ಅವರು ಆಗ್ರಹಿಸಿದರು. ಇಲ್ಲವಾದರೆ ರಾಜ್ಯದಲ್ಲಿ ದೊಡ್ಡ ಆಂದೋಲನ ಮಾಡಲಿದ್ದೇವೆ; ಯಾವುದೇ ಸಂಘಟನೆ ಹೋರಾಟಕ್ಕೆ ಇಳಿದರೆ ಅವರನ್ನು ಬೆಂಬಲಿಸುತ್ತೇವೆ ಎಂದು ಪ್ರಕಟಿಸಿದರು.
ಬೊಮ್ಮಾಯಿಯವರು ಮೀಸಲಾತಿ ಹೆಚ್ಚಿಸಿದಾಗ ಕಾಂಗ್ರೆಸ್ಸಿಗರು ಶೆಡ್ಯೂಲ್ 9ಕ್ಕೆ ಸೇರಿಸಬೇಕಿತ್ತು ಎಂದು ಅಪಸ್ವರ ತೆಗೆದಿದ್ದರು. ವಕೀಲರಾದ ಸಿದ್ದರಾಮಯ್ಯನವರ ಪ್ರಾಕ್ಟೀಸ್ ಕೇವಲ ಭಾನುವಾರ ಇತ್ತೇ ಅಥವಾ ಬೇರೆ ದಿನಗಳಲ್ಲೇ ಇತ್ತೇ ಎಂದು ಕೇಳಿದರು. ನೀವೇನು ಭಾನುವಾರದ ವಕೀಲರೇ ಎಂದು ಪ್ರಶ್ನಿಸಿದರು.



