ಶಿವಮೊಗ್ಗ: ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಸಿಹಿ ಸುದ್ದಿ ಸಿಕ್ಕಿದೆ.
ಭದ್ರಾ ಜಲಾಶಯದ ಬಲದಂಡೆ ಮತ್ತು ಎಡದಂಡೆ ನಾಲೆಗಳಿಗೆ ಇಂದಿನಿಂದ ನೀರು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಒಟ್ಟು 1,500 ಕ್ಯೂಸೆಕ್ ನೀರನ್ನು ಮುಂದಿನ 10 ದಿನಗಳ ಕಾಲ ನಾಲೆಗಳಿಗೆ ಹರಿಸಲಾಗುತ್ತದೆ. ಮುಖ್ಯವಾಗಿ ಒಣಗುತ್ತಿರುವ ತೆಂಗು ಮತ್ತು ಅಡಿಕೆ ತೋಟಗಳನ್ನು ಉಳಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಕುರಿತು ರೈತ ಸಂಘದ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಮಾಹಿತಿ ನೀಡಿದ್ದಾರೆ. ನೀರು ಬಿಡುಗಡೆಗೆ ಕ್ರಮ ಕೈಗೊಂಡ ಮುಖ್ಯಮಂತ್ರಿ, ನೀರಾವರಿ ಸಚಿವರು ಹಾಗೂ ಶಾಸಕ ಸಂಗಮೇಶ್ ಅವರಿಗೆ ಅವರು ಧನ್ಯವಾದ ಸಲ್ಲಿಸಿದ್ದಾರೆ.
ನಾಲೆಗಳಿಗೆ ನೀರು ಹರಿಸುವುದರಿಂದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದ್ದು, ಒಣಗುವ ಹಂತದಲ್ಲಿರುವ ತೋಟಗಳಿಗೆ ನೆರವಾಗಲಿದೆ ಎಂದು ರೈತರು ನಿರೀಕ್ಷಿಸಿದ್ದಾರೆ.









