ಬೆಂಗಳೂರು: ರಾಜ್ಯ ಹಾಗೂ ದೇಶದಲ್ಲಿ ನಡೆದಿರುವ ಮತಗಳ್ಳತನ ವಿರುದ್ಧ ಎಐಸಿಸಿ ನಾಯಕರು ಹಮ್ಮಿಕೊಂಡಿರುವ ಸಹಿಸಂಗ್ರಹ ಅಭಿಯಾನದಲ್ಲಿ ಕರ್ನಾಟಕದಿಂದ 1,12,40,000 ಸಹಿಗಳನ್ನು ಸಂಗ್ರಹಿಸಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಕಾಂಗ್ರೆಸ್ ಕಚೇರಿಯ ಭಾರತ ಜೋಡೋ ಭವನದಲ್ಲಿ ಶನಿವಾರ ನಡೆದ ಜಂಟಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಅವರು ಮಾತನಾಡಿದರು.
“ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳು ಹಾಗೂ ನಮ್ಮ ಪಕ್ಷ ರಾಜಕೀಯವಾಗಿ ವಿಭಾಗಿಸಿಕೊಂಡಿರುವ 40 ಜಿಲ್ಲೆಗಳಿಂದ ಸಹಿ ಸಂಗ್ರಹ ಮಾಡಲಾಗಿದೆ. ನಮ್ಮ ಕಾರ್ಯಕರ್ತರು ಬಹಳ ಪ್ರಾಮಾಣಿಕವಾಗಿ ಈ ಅಭಿಯಾನದಲ್ಲಿ ಕೆಲಸ ಮಾಡಿದ್ದಾರೆ. 8-10 ಕಡೆ ಹೊರತು ಪಡಿಸಿ, ಉಳಿದ ಎಲ್ಲಾ ಕಡೆಗಳಲ್ಲಿ ಚೆನ್ನಾಗಿ ಸಹಿ ಸಂಗ್ರಹಿಸಲಾಗಿದೆ. ಬೂತ್ ವಾರು ಸಹಿ ಸಂಗ್ರಹಿಸಲಾಗಿದ್ದು, ಜನರಲ್ಲಿ ಮತಗಳ್ಳತನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ” ಎಂದು ತಿಳಿಸಿದರು.
“ಈ ಸಹಿ ಸಂಗ್ರಹದ ಅರ್ಜಿಗಳನ್ನು ಇದೇ ತಿಂಗಳು 10ರಂದು ದೆಹಲಿಗೆ ರವಾನಿಸಲು ತೀರ್ಮಾನಿಸಲಾಗಿದೆ. ಈ ಅಭಿಯಾನದಲ್ಲಿ ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡಿರುವ ಜಿಲ್ಲಾಧ್ಯಕ್ಷರ ಜೊತೆ ವಿಮಾನದಲ್ಲಿ ಈ ಸಹಿ ಸಂಗ್ರಹಿಸಿರುವ ಅರ್ಜಿಗಳನ್ನು ದೆಹಲಿಗೆ ತಲುಪಿಸಲಾಗುವುದು.
ನವೆಂಬರ್ ಮೂರನೇ ವಾರದಲ್ಲಿ (ನ.25) ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಸಮಾವೇಶ ಮಾಡಲು ಚಿಂತನೆ ನಡೆಸಲಾಗಿದೆ. ಈ ಅಭಿಯಾನವನ್ನು ಇಲ್ಲಿಗೆ ನಿಲ್ಲಿಸುವುದಿಲ್ಲ. ಎಲ್ಲಿ ಅಭಿಯಾನ ಆಗಿಲ್ಲ, ಆ ಪ್ರದೇಶಗಳಲ್ಲಿ ಇನ್ನು ಮೂರ್ನಾಲ್ಕು ದಿನ ಕಾಲಾವಕಾಶ ನೀಡಿ ಮುಂದುವರೆಸಲು ಸೂಚಿಸಲಾಗುವುದು” ಎಂದು ತಿಳಿಸಿದರು.
ಮತಪತ್ರದ ಮೂಲಕ ಪಾಲಿಕೆ ಚುನಾವಣೆ ನಡೆಸಲು ಸರ್ಕಾರ ಚಿಂತನೆ
“ಚುನಾವಣಾ ಅಕ್ರಮದ ತನಿಖೆಗೆ ಪೂರಕ ದಾಖಲೆ ನೀಡಿ ಎಂದು ಮಾಹಿತಿ ಕೇಳಿದರೆ, ಆಯೋಗವೇ ನಮ್ಮ ಬಳಿ ಸಾಕ್ಷಿ ಕೇಳುತ್ತಿದೆ. ಹೀಗಾಗಿ ಪಾಲಿಕೆ ಚುನಾವಣೆಗಳನ್ನು ಮತಪತ್ರಗಳ ಮೂಲಕ ನಡೆಸಲು ಚಿಂತನೆ ನಡೆಸಿದ್ದೇವೆ. ಈ ಅಭಿಯಾನವನ್ನು ಯಶಸ್ವಿಯಾಗಿ ನಡೆಸಿರುವ ರಾಜ್ಯಗಳ ಪೈಕಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಎಐಸಿಸಿ ಅವರು ತಿಳಿಸಿದ್ದು, ಇದರ ಯಶಸ್ಸು ಬಿಎಲ್ಎಗಳು, ಬ್ಲಾಕ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಶಾಸಕರು ಹಾಗೂ ಪರಾಜಿತ ಅಭ್ಯರ್ಥಿಗಳದ್ದಾಗಿದೆ. ಈ ಹೋರಾಟ ಹಮ್ಮಿಕೊಂಡಿರುವ ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರಿಗೆ ಅಭಿನಂದಿಸುತ್ತೇನೆ” ಎಂದು ತಿಳಿಸಿದರು.



