ವಿಜಯಸಾಕ್ಷಿ ಸುದ್ದಿ, ರೋಣ : ಸೌಹಾರ್ದತೆಯ ತವರು ಎಂದು ಖ್ಯಾತಿ ಪಡೆದಿರುವ ಮಾರನಬಸರಿ ಗ್ರಾಮದಲ್ಲಿ ಗ್ರಾಮ ದೇವತೆಯ ಜಾತ್ರಾ ಮಹೋತ್ಸವವು ಸಾವಿರಾರು ಭಕ್ತರ ಸಂಗಮದಲ್ಲಿ ಅದ್ದೂರಿಯಾಗಿ ಜರುಗಿತು.
ಸೋಮವಾರ ಬೆಳಗಿನ ಜಾವ ದೇವಸ್ಥಾನದಲ್ಲಿ ದೇವತೆಗೆ ವಿಷೇಷ ಪೂಜಾ ಕಾರ್ಯಗಳನ್ನು ನೆರವೇರಿಸುವ ಮೂಲಕ ಭಕ್ತರ ದರ್ಶನಕ್ಕೆ ಅಣಿಗೊಳಿಸಲಾಯಿತು. ನಂತರ ಗ್ರಾಮ ದೇವತೆಯು ಮಾರುತೇಶ್ವರನ ಸನ್ನಿಧಾನಕ್ಕೆ ತೆರಳಿ ಮರಳಿ ಬರುವ ಸಂಧರ್ಭದಲ್ಲಿ ಉಗ್ರ ರೂಪವನ್ನು ತಾಳುವ ಮೂಲಕ ಭಕ್ತರ ಮನೆಗೆ ತೆರಳಿ ದಂಡಿ ಹಾಗೂ ಸೀರೆಯನ್ನು ಮುಡಿಯುವದರೊಂದಿಗೆ ದಲಿತ ಕಾಲೋನಿಯಲ್ಲಿರುವ ದುರ್ಗಾದೇವಿಯ ದೇವಸ್ಥಾನಕ್ಕೆ ಆಗಮಿಸಿ ಭಕ್ತರಿಗೆ ದರ್ಶನಗೈದಳು.
ಕೆಲ ಗಂಟೆಗಳವರೆಗೆ ಗ್ರಾಮದಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು. ಗ್ರಾಮದೇವಿಯ ದರ್ಶನ ಪಡೆಯಲು ಸಾವಿರಾರು ಭಕ್ತರು ಕಾಲ್ನಡಿಗೆಯಲ್ಲಿ ಆಗಮಿಸಿದ್ದು ಜಾತ್ರಾ ಮಹೋತ್ಸವದ ವಿಶೇಷತೆಯಾಗಿತ್ತು.
ಗ್ರಾಮ ದೇವತೆಯ ಉಗ್ರ ರೂಪವನ್ನು ಕಂಡ ಸಾವಿರಾರು ಭಕ್ತರು ದೇವಿಯ ನಾಮ ಸ್ಮರಣೆಯನ್ನು ಮಾಡುತ್ತಾ ಜಯಘೋಷಗಳನ್ನು ಕೂಗಿ ದೇವಿ ಬರುವ ದಾರಿಯಲ್ಲಿ ನೀರು ಹಾಕುವ ಮೂಲಕ ಭಕ್ತಿ ಮೆರದರು. ದೇವಿಯು ಸಣ್ಣ ಮಸೂತಿ, ದೊಡ್ಡ ಮಸೂತಿಗಳಿಗೆ ಭೇಟಿ ನೀಡಿದ ಸಂಧರ್ಭದಲ್ಲಿ ಹಿಂದೂ-ಮುಸ್ಲಿಂ ಭಕ್ತರ ಭಕ್ತಿ ಇಮ್ಮಡಿಗೊಂಡಿತ್ತು.
ಗ್ರಾಮ ದೇವತೆಯು ದ್ವಾರ ಬಾಗಿಲ ಬಳಿ ಬರುತ್ತಿದ್ದಂತೆ ದೇವಿ ಉರಿನೊಳಗೆ ಹೊಗಲು ನಿರಾಕರಿಸಿ ದ್ವಾರ ಬಾಗಿಲದ ಬಳಿ ಗಂಟೆಗೂ ಹೆಚ್ಚು ಕಾಲ ನಿಂತಿದ್ದು ಭಕ್ತರ ಭಯಕ್ಕೆ ಕಾರಣವಾಗಿತ್ತು. ಬಳಿಕ ಭಕ್ತರು ದೇವಿಯ ಭಾವಚಿತ್ರಕ್ಕೆ ಹೂಮಾಲೆಯನ್ನು ಸಮರ್ಪಿಸಿ ಧನ್ಯತೆಯನ್ನು ಮೆರೆದಾಗ ದೇವಿ ಉರಿನೊಳಕ್ಕೆ ಪ್ರವೇಶಿಸಿದಳು.