ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಪಟ್ಟಣದಲ್ಲಿ ಈ ಹಿಂದಿನಿಂದಲೂ ಸಂಪ್ರದಾಯದಂತೆ ವಿಶೇಷವಾಗಿ ಹುಲ್ಲಿನಿಂದ ತಯಾರಿಸಿದ ಬೃಹತ್ ಹುಲ್ಲುಗಾಮನ ಮೆರವಣಿಗೆಯು ನಡೆಯುತ್ತಾ ಬಂದಿದ್ದು, ಇದೀಗ ಹೋಳಿ ಹಬ್ಬದ ಪ್ರಯುಕ್ತ ಮಾ.24ರ ರಾತ್ರಿ 10 ಗಂಟೆಯಿಂದ ಮಾ.25ರ ಸೋಮವಾರ ಬೆಳಗಿನ ಜಾವದವರೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹುಲ್ಲುಗಾಮನ ಬೃಹತ್ ಮೆರವಣಿಗೆಯು ನಡೆಯಲಿದೆ.
ಅಲಂಕೃತ ಮಂಟಪದಲ್ಲಿ ಕಾಮನ ಮೆರವಣಿಗೆ: ರವಿವಾರ ರಾತ್ರಿ 10ಗಂಟೆ ಸುಮಾರಿಗೆ ಪಟ್ಟಣದ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತದಿಂದ ವಿಶೇಷವಾಗಿ ತಯಾರಿಸಿದಂತಹ ಹುಲ್ಲುಗಾಮನ ಮೆರವಣಿಗೆಯು ಪ್ರಾರಂಭವಾಗಲಿದ್ದು, ಕಾಮನ ಮೂರ್ತಿಗೆ ವಿಶೇಷ ಅಲಂಕಾರ ಮತ್ತು ವೇಷಭೂಷಣಗಳನ್ನು ತೊಡಿಸಲಾಗುತ್ತದೆ. ಅಲಂಕೃತ ಎತ್ತುಗಳ ಬಂಡಿಯನ್ನು ಸಹ ಹಸಿರು ತೋರಣಗಳಿಂದ ಸಿಂಗರಿಸಿ ಹುಲ್ಲುಗಾಮನ ಅದ್ಧೂರಿ ಮೆರವಣಿಗೆಯು ನಡೆಯಲಿದ್ದು, ನಂತರ ಬಡಿಗೇರ ಓಣಿ, ಡಬಾಲಿ ಓಣಿ, ಕೆಳಗೇರಿ ಓಣಿ, ಶೆಟ್ಟರ ಓಣಿ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸೋಮವಾರ ಬೆಳಗಿನ ಜಾವ ಮತ್ತೆ ವಾಲ್ಮೀಕಿ ವೃತ್ತದಲ್ಲೇ ಕಾಮದಹನ ನಡೆಯಲಿದೆ.
ಕಿವಿಗಿಡಚಿಕ್ಕುವ ಹಲಗೆಗಳ ಸದ್ದು: ಬೃಹತ್ ಮೆರವಣಿಗೆಯುದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಯುವಕರು ಭಾಗಿಯಾಗಿ ಕಿವಿಗಿಡಚಿಕ್ಕುವ ರೀತಿಯಲ್ಲಿ ಹಲಗೆಗಳ ಸದ್ದು ಮಾಡುತ್ತಾರೆ. ಯಾರು ಎಷ್ಟೇ ಹೇಳಿದರೂ ತಮಗೆ ಸಾಕಾಗುವವರೆಗೂ ಹಲಗೆಯನ್ನು ಬಾರಿಸುವುದನ್ನು ನಿಲ್ಲಿಸುವದಿಲ್ಲ. ಯುವಕರು ಸಹ ಹಲವು ವೇಷಭೂಷಣಗಳನ್ನು ಧರಿಸಿ ಮೆರವಣಿಗೆಯ ಆಕರ್ಷಣೆಯಾಗುತ್ತಾರೆ. ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಜನರೂ ಭಾಗಿಯಾಗಲಿದ್ದಾರೆ. ಅಹಿತಕರ ಘಟನೆಗಳು ಜರುಗದಂತೆ ಪಟ್ಟಣದ ಪ್ರಮುಖ ಮುಖಂಡರು ಸಹ ಭಾಗಿಯಾಗಿ ಮೆರವಣಿಗೆಯನ್ನು ಯಶಸ್ವಿಗೊಳಿಸುತ್ತಾ ಬಂದಿದ್ದಾರೆ.
ಸೋಮವಾರ ಓಕುಳಿ
ಸೋಮವಾರ ಬೆಳಗಿನ ಜಾವ ಕಾಮದಹನದ ನಂತರ ಓಕುಳಿ ಪ್ರಾರಂಭವಾಗಲಿದ್ದು, ಪುನಃ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತದಿಂದಲೇ ಎತ್ತುಗಳೊಂದಿಗೆ ಓಕುಳಿ ಬಂಡಿಯ ಮೆರವಣಿಗೆಯು ಅದೇ ಮಾರ್ಗದಲ್ಲಿ ಸಂಚರಿಸಲಿದ್ದು, ಯುವಕರು ತಮ್ಮ ತಮ್ಮ ಸ್ನೇಹಿತರಿಗೆ ಬಣ್ಣ ಎರಚುವ ಮೂಲಕ 4 ಗಂಟೆಯವರೆಗೂ ಮೆರವಣಿಗೆಯಲ್ಲಿ ಪಾಲ್ಗೊಳ್ಳುವರು.