ಚಾಮರಾಜನಗರ: ಕಾವೇರಿ ವನ್ಯಜೀವಿಧಾಮದ ಶಾಗ್ಯ ಬೀಟ್‌ನಲ್ಲಿ ನಡೆದ ಶೂಟೌಟ್‌ನಲ್ಲಿ ಮೃತಪಟ್ಟ ಕುಮಾರ್, ಅಂತೋಣಿ ಸಾಮಿ ಹಾಗೂ ಪೀಟರ್ ಅವರ ಕುಟುಂಬಗಳಿಗೆ ಹನೂರು ಶಾಸಕ ಎಂ.ಆರ್. ಮಂಜುನಾಥ್ ತಲಾ ₹15 ಲಕ್ಷ ಪರಿಹಾರ ವಿತರಿಸಿದ್ದಾರೆ. ಸರ್ಕಾರದಿಂದ ₹5 ಲಕ್ಷ ಹಾಗೂ ವೈಯಕ್ತಿಕವಾಗಿ ₹10 ಲಕ್ಷ ಸೇರಿಸಿ ಒಟ್ಟು ₹45 ಲಕ್ಷ ಪರಿಹಾರವನ್ನು ಮೂರು ಕುಟುಂಬಗಳಿಗೆ ನೀಡಲಾಗಿದೆ. ಪ್ರತಿಭಟನಾನಿರತರಿಗೆ ನೀಡಿದ್ದ ಭರವಸೆಯಂತೆ ಶಾಸಕರು ಮೃತರ ಮನೆಗಳಿಗೆ ತೆರಳಿ ಪರಿಹಾರ ಹಸ್ತಾಂತರಿಸಿದ್ದಾರೆ.
ಪ್ರಕರಣದ ತನಿಖೆ ಮುಂದುವರಿದಿದ್ದು, ತನಿಖೆಯಲ್ಲಿ ತಪ್ಪಿತಸ್ಥರು ಕಂಡುಬಂದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಂ.ಆರ್. ಮಂಜುನಾಥ್ ಭರವಸೆ ನೀಡಿದ್ದಾರೆ.
ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಪೂರ್ಣಗೊಂಡ ಬಳಿಕ ಮೂವರ ಮೃತದೇಹಗಳನ್ನು ತಡರಾತ್ರಿ ಗ್ರಾಮಕ್ಕೆ ತರಲಾಗಿದೆ. ತೋಮಿಯಾರ್ ಪಾಳ್ಯದ ಚರ್ಚ್‌ನಲ್ಲಿ ಮೃತದೇಹಗಳನ್ನು ಇರಿಸಲಾಗಿದ್ದು, ಪಾದ್ರಿ ಕೆ. ಚಾರ್ಲ್ಸ್ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಬಳಿಕ ಕ್ರೈಸ್ತ ಸಂಪ್ರದಾಯದಂತೆ ಸ್ವಗ್ರಾಮಗಳಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬಸ್ಥರು ಸಿದ್ಧತೆ ನಡೆಸಿದ್ದಾರೆ.
ಇತ್ತ ಶೂಟೌಟ್ ನಡೆದ ಸ್ಥಳದಲ್ಲಿ ಕೊಳ್ಳೇಗಾಲ ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಎರಡು ದಿನಗಳ ಕಾಲ ಸ್ಥಳ ಮಹಜರು ನಡೆಸಿದ್ದಾರೆ. ಅರಣ್ಯ ಇಲಾಖೆ ಕೂಡ ಪ್ರಕರಣಕ್ಕೆ ಸಂಬಂಧಿಸಿದ ಹಲವು ಸಾಕ್ಷ್ಯಗಳನ್ನು ತನಿಖಾಧಿಕಾರಿಗೆ ಸಲ್ಲಿಸಿದೆ.
ಘಟನೆ ಬಳಿಕ ವಶಕ್ಕೆ ಪಡೆದಿದ್ದ ಸುಮಾರು 30 ಕೆ.ಜಿ. ಜಿಂಕೆ ಮಾಂಸ, ಎರಡು ಒಂಟಿ ನಳಿಕೆಯ ನಾಡ ಬಂದೂಕುಗಳು, ಹೆಡ್‌ಟಾರ್ಚ್‌ಗಳು, ಚಪ್ಪಲಿಗಳು, ಅಡುಗೆ ಪಾತ್ರೆಗಳು, ಸಾಂಬಾರ ಪದಾರ್ಥಗಳು, ಚಾಕು ಹಾಗೂ ಬ್ಯಾಗ್‌ಗಳನ್ನು ಸಾಕ್ಷ್ಯವಾಗಿ ತನಿಖಾಧಿಕಾರಿಗೆ ಹಸ್ತಾಂತರಿಸಲಾಗಿದೆ.
ಪ್ರಕರಣವನ್ನು ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಂಪೂರ್ಣ ತನಿಖಾ ವರದಿ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ ಮೃತ ಪೀಟರ್ ಅವರ ಸಹೋದರಿ ಮಾರ್ಗರೇಟ್ ಗಂಭೀರ ಆರೋಪ ಮಾಡಿದ್ದಾರೆ. ಪಂಚನಾಮೆ ಹೆಸರಿನಲ್ಲಿ ತಮ್ಮಿಂದ ಸಹಿ ಪಡೆದು, ತಮ್ಮ ಗಮನಕ್ಕೆ ಬಾರದಂತೆ ಇಬ್ಬರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಹಾಗೂ ಮೃತದೇಹಗಳನ್ನು ಐಸ್‌ಬಾಕ್ಸ್‌ನಲ್ಲೂ ಇರಿಸಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಮಾರ್ಟಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸೆಲ್ವಂ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ಕ್ರೈಸ್ತ ಸಮುದಾಯದ ಪ್ರಮುಖ ನಾಯಕರು ಈ ಘಟನೆಯಲ್ಲಿ ಮೃತ ಕುಟುಂಬಗಳ ನೋವಿಗೆ ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಭಾವಿ ಸಮುದಾಯಗಳಿಗೆ ಇಂತಹ ಘಟನೆ ನಡೆದಿದ್ದರೆ ರಾಜ್ಯಾದ್ಯಂತ ದೊಡ್ಡ ಮಟ್ಟದ ಹೋರಾಟ ನಡೆಯುತ್ತಿತ್ತು ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.



