ಹಾವೇರಿ: ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ವ್ಯಕ್ತಿಯೊಬ್ಬರು ಕಾಲು ಜಾರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಿರಗೆರೆ ಗ್ರಾಮದ ಬಳಿ ತುಂಗಭದ್ರಾ ನದಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಅಬ್ಬಾಸ್ ನಾಸೂರ್ (52) ಎಂದು ಗುರುತಿಸಲಾಗಿದೆ. ಅವರು ಹಿರೇಕೆರೂರುಕೋಡ ಗ್ರಾಮದ ನಿವಾಸಿಯಾಗಿದ್ದು, ಮಂಗಳವಾರ ಕುಟುಂಬ ಸಮೇತ ಪಿಕ್ನಿಕ್‌ಗೆ ತೆರಳಿದ್ದರು.
ಈ ವೇಳೆ ನದಿಯಲ್ಲಿ ಸ್ನಾನ ಮಾಡಲು ಇಳಿದಾಗ ಕಾಲು ಜಾರಿ ನೀರಿನಲ್ಲಿ ಮುಳುಗಿ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಘಟನೆಯ ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ನುರಿತ ಈಜುಗಾರರು ಹುಡುಕಾಟ ನಡೆಸಿ ಶವವನ್ನು ಹೊರತೆಗೆದಿದ್ದಾರೆ.
ರಟ್ಟಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.



