HomeGadag Newsಹಲವು ಪ್ರಕರಣಗಳಿಗೆ ಸ್ಥಳದಲ್ಲಿಯೇ ನಿರ್ಣಯ

ಹಲವು ಪ್ರಕರಣಗಳಿಗೆ ಸ್ಥಳದಲ್ಲಿಯೇ ನಿರ್ಣಯ

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಸಾರ್ವಜನಿಕ ಅಹವಾಲು, ಕುಂದುಕೊರತೆ ಮರು ವಿಚಾರಣೆ ಹಾಗೂ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾದ ಪ್ರಕರಣಗಳ ಕುರಿತು ವಿಚಾರಣೆ ನಡೆಸಿದರು.

ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಸಾರ್ವಜನಿಕರ ಬಾಕಿ ಪ್ರಕರಣಗಳ ವಿಲೇವಾರಿ ಮತ್ತು ವಿಚಾರಣೆ ನಡೆಸಿದರು. ಮುಳಗುಂದದ ವಿರುಪಾಕ್ಷಪ್ಪ ಅಕ್ಕಿ ಅವರು ತಮ್ಮ ಮನೆಯ ಹಿಂದೆ ಇರುವ ಸರ್ಕಾರಿ ರಸ್ತೆ ಒತ್ತುವರಿ ಕುರಿತು ದೂರು ಸಲ್ಲಿಸಿದ್ದು, ವಿಚಾರಣೆ ಕೈಗೆತ್ತಿಕೊಂಡ ಲೋಕಾಯುಕ್ತರು ಅಧಿಕಾರಿಗಳಿಂದ ಪ್ರಕರಣ ಕುರಿತು ವಿವರಣೆ ಪಡೆದರು. ಅಧಿಕಾರಿಗಳು ರಸ್ತೆಯ ಒತ್ತುವರಿ ತೆರವುಗೊಳಿಸಿದ್ದರ ಕುರಿತು ತಿಳಿಸಿದ್ದು, ಪ್ರಕರಣ ಮುಕ್ತಾಯಗೊಳಿಸಲಾಯಿತು.

ಗದಗನ ಹನುಮಂತಪ್ಪ ಚಲವಾದಿ ಅವರು ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರ ಕಾರ್ಯಾಲಯಕ್ಕೆ ನಗರಸಭೆಯ ವ್ಯಾಪ್ತಿಯ ಸರ್ವೇ ಉತಾರದ ಕುರಿತು ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಕೋರಿದ್ದು, ಅವರು ನೀಡಿದ ಮಾಹಿತಿ ಸುಳ್ಳು ಎಂದು ಆರೋಪಿಸಿ ಪ್ರಕರಣ ದಾಖಲಾಗಿಸಲಾಗಿದೆ. ಈ ಕುರಿತು ಅರ್ಜಿದಾರರು ಮಾಹಿತಿ ಹಕ್ಕಿನಡಿ ಸಂಬಂಧಿಸಿದವರಿಗೆ ಮೇಲ್ಮನವಿ ಸಲ್ಲಿಸುವುದರ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ತಿಳಿಸಿ ಅವರ ಪ್ರಕರಣ ವಜಾಗೊಳಿಸಲಾಯಿತು.

ಶಾಂತಗಿರಿಯ ಮಲ್ಲೇಶಪ್ಪ ಅವರು ಜೀವಂತವಿದ್ದರೂ ಸಹಿತ ಗ್ರಾಮ ಲೆಕ್ಕಾಧಿಕಾರಿಗಳು ಸುಳ್ಳು ಮರಣ ಪ್ರಮಾಣಪತ್ರ ನೀಡಿರುತ್ತಾರೆಂದು ದೂರು ನೀಡಿದ್ದು, ಜನತಾ ದರ್ಶನ ಪ್ರಾರಂಭವಾದ ಮೇಲೆ ಅವರ ಪಿಂಚಣಿ ಮಂಜೂರಾತಿ ಮಾಡಲಾಗಿದೆ. ಈ ಕುರಿತು ಸೂಕ್ತ ಸಾಕ್ಷ್ಯಾಧಾರಗಳನ್ನು ಅವರು ಒದಗಿಸಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಸಂಪನ್ಮೂಲ ಅಧಿಕಾರಿ ಪ್ರಕಾಶ ನಾಡಗೇರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾದಿಕಾರಿ ಭರತ್ ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರಾದ ಜಿ.ಎಸ್. ಪಲ್ಲೇದ, ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಸತೀಶ ಚಿಟಗುಬ್ಬಿ, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಸದರಿ ಪ್ರಕರಣಗಳ ವಿಚಾರಣೆ ಸಂದರ್ಭದಲ್ಲಿ ನಿವೇಶನ ಹಂಚಿಕೆ, ನಿವೃತ್ತಿ ನಂತರ ಪಿಂಚಣಿ ನಿಗದಿ, ಶಾಲಾ ಆಟದ ಮೈದಾನದ ಒತ್ತುವರಿ, ಬೆಳೆ ಪರಿಹಾರ, ಕೆರೆ ಒತ್ತುವರಿ, ವೇತನ ಸ್ಥಗಿತ ಹೀಗೆ ಹಲವು ರೀತಿಯ ಪ್ರಕರಣಗಳ ವಿಚಾರಣೆ ನಡೆಸಿ, ಹಲವು ಪ್ರಕರಣಗಳಿಗೆ ಸ್ಥಳದಲ್ಲಿಯೇ ನಿರ್ಣಯ ನೀಡಲಾಯಿತು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!