ಹಾಸನ:- ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಪರಿಣಾಮ ಇಂದು ಶಾಲೆಯ ಕಟ್ಟಡದ ಗೋಡೆ ಹಾಗೂ ಹೆಂಚುಗಳು ಬಿದ್ದಿವೆ. ಅಕಸ್ಮಾತ್ ಶಾಲೆಗೆ ರಜೆ ಇಲ್ಲದೇ ಹೋಗಿದ್ದರೆ, ಹಲವಾರು ಮಕ್ಕಳು ಇಲ್ಲಿ ಸೇರಿರುತ್ತಿದ್ದರು. ಇದರಿಂದ ಅನಾಹುತ ಆಗುವ ಸಾಧ್ಯತೆ ಇತ್ತು.
ಅದೃಷ್ಟವಶಾತ್ ಶಾಲೆಗೆ ರಜೆ ಘೋಷಣೆ ಮಾಡಿದ್ದರಿಂದ ಮಕ್ಕಳು ಮತ್ತು ಶಿಕ್ಷಕರು ಬಚಾವ್ ಆಗಿದ್ದಾರೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ವರುಣನ ಅಬ್ಬರಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮೊನ್ನೆಯಿಂದ ಸುರಿಯುತ್ತಿರುವ ಭಾರಿ ಮಳೆಗೆ ರಸ್ತೆಯ ತುಂಬೆಲ್ಲ ನೀರು ಹರಿಯುತ್ತಿದೆ.
ಹಲವು ಕಡೆಗಳಲ್ಲಿ ಭೂಕುಸಿತ ಉಂಟಾಗಿದ್ದು, ಬಿರುಗಾಳಿ ಸಹಿತ ಮಳೆಯ ಅಬ್ಬರಕ್ಕೆ ಮರಗಳು ನೆಲಕ್ಕುರುಳಿವೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನರು ಮನೆಯಿಂದ ಹೊರಬರದ ಪರಿಸ್ಥಿತಿ ನಿರ್ಮಾಣವಾಗಿದೆ.



