ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಾತ್ರಿ ವೇಳೆ ಧಾರಾಕಾರ ಮಳೆ ಸುರಿದಿದ್ದು, ನಗರದ ಹಲವು ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.
ಭಾರಿ ಮಳೆಯಿಂದ ಹಲವು ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಯಶವಂತಪುರ, ಮೆಜೆಸ್ಟಿಕ್, ಮಲ್ಲೇಶ್ವರಂ, ರಾಜಾಜಿನಗರ, ಕಾರ್ಪೋರೇಷನ್, ಮಾರ್ಕೆಟ್ ಹಾಗೂ ಲಾಲ್‌ಬಾಗ್ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ಮಳೆಯಾಗಿದೆ. ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದ್ದು, ಕೆಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ.
ಇನ್ನು ವೈಟ್‌ಫೀಲ್ಡ್, ಮಾರತ್ತಹಳ್ಳಿ, ಔಟರ್ ರಿಂಗ್ ರಸ್ತೆ, ಬಳಗೆರೆ ಹಾಗೂ ಬೆಳ್ಳಂದೂರು ಸುತ್ತಮುತ್ತಲೂ ಭಾರಿ ಮಳೆಯಾಗಿದೆ. ಮಳೆ ಸುರಿಯುತ್ತಿದ್ದ ಸಂದರ್ಭದಲ್ಲೇ ವಾಹನಗಳ ಸಂಖ್ಯೆ ಹೆಚ್ಚಿದ್ದರಿಂದ ಹಲವೆಡೆ ಸಂಚಾರ ದಟ್ಟಣೆ ಉಂಟಾಗಿತ್ತು. ಮಳೆ ನಡುವೆಯೇ ಸಂಚಾರ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಇತ್ತ ನೆಲಮಂಗಲದ ಹಲವು ಪ್ರದೇಶಗಳಲ್ಲೂ ರಾತ್ರಿಯಿಡೀ ಮಳೆಯಾಗಿದ್ದು, ವಾತಾವರಣ ತಂಪಾಗಿತ್ತು. ಆದರೆ ಬೆಳಂಬೆಳಗ್ಗೆ ಮಳೆಯ ನಡುವೆಯೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಇಚರ್ ಲಾರಿ ಹಾಗೂ 108 ಆಂಬ್ಯುಲೆನ್ಸ್ ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಚಿಕ್ಕಬಾಣಾವಾರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರ ವಿವರ ಹಾಗೂ ನಿಖರ ಕಾರಣದ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.



