ಕಲಬುರಗಿ: ಜಿಲ್ಲೆಯಲ್ಲಿ ನವೆಂಬರ್ 16ರಂದು ನಡೆಯಲಿರುವ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ. ಕಲಬುರಗಿ ವಿಭಾಗೀಯ ಪೀಠದಲ್ಲಿ ಇಂದು ನಡೆದ ವಿಚಾರಣೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ವಾದ–ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್ ಪೀಠವು, ನವೆಂಬರ್ 16ರಂದು ಮಧ್ಯಾಹ್ನ 3.30ರಿಂದ ಸಂಜೆ 5.30ರವರೆಗೆ ಪಥಸಂಚಲನ ನಡೆಸಲು ಅನುಮತಿ ನೀಡಿದೆ.
ಜಿಲ್ಲಾಡಳಿತವು ಈ ಕುರಿತು ಹೈಕೋರ್ಟ್‌ಗೆ ಮಾಹಿತಿ ನೀಡಿದ್ದು, ಪಥಸಂಚಲನದಲ್ಲಿ ಒಟ್ಟು 350 ಜನರು ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ. ಅದರಲ್ಲಿ 300 ಕಾರ್ಯಕರ್ತರು ಮತ್ತು 50 ಬ್ಯಾಂಡ್ ವಾದಕರು ಇರಲಿದ್ದಾರೆ ಎಂದು ತಿಳಿಸಲಾಗಿದೆ.
ಪಥಸಂಚಲನಕ್ಕೆ ಅನುಮತಿ ಕೋರಿ ಆರ್‌ಎಸ್‌ಎಸ್ ಜಿಲ್ಲಾ ಸಂಘಚಾಲಕ ಅಶೋಕ್ ಪಾಟೀಲ್ ಹಾಗೂ ಇತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಕಳೆದ ನವೆಂಬರ್ 7ರಂದು ನಡೆದಿದ್ದು, ಆ ವೇಳೆ ಹೈಕೋರ್ಟ್ ಸರ್ಕಾರಕ್ಕೆ ಪ್ರತ್ಯೇಕ ದಿನಾಂಕ ನಿಗದಿಪಡಿಸಲು ಸೂಚಿಸಿತ್ತು. ಆದರೆ ಒಮ್ಮತಕ್ಕೆ ಬರದ ಹಿನ್ನೆಲೆ, ನ್ಯಾಯಾಲಯವೇ ಅಂತಿಮ ತೀರ್ಮಾನ ಕೈಗೊಂಡಿದೆ.
ಹೈಕೋರ್ಟ್ ನಿರ್ದೇಶನದಂತೆ ಮೊದಲ ಶಾಂತಿ ಸಭೆ ಕಲಬುರಗಿಯಲ್ಲಿ ನಡೆದಿತ್ತು, ಆದರೆ ಅದು ಅಶಾಂತಿಯಲ್ಲಿ ಅಂತ್ಯಗೊಂಡಿತು. ನಂತರ ಎಜೆ ಶಶಿಕಿರಣ್ ಶೆಟ್ಟಿ ಅವರ ಬೆಂಗಳೂರು ಕಚೇರಿಯಲ್ಲಿ ನಡೆದ ಎರಡನೇ ಶಾಂತಿ ಸಭೆ ಫಲಪ್ರದವಾಗಿತ್ತು ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಇಂದು ಅಂತಿಮವಾಗಿ ನವೆಂಬರ್ 16ರಂದು ಪಥಸಂಚಲನ ನಡೆಸಲು ಅನುಮತಿ ನೀಡಿದೆ.


