ವಿಜಯಸಾಕ್ಷಿ ಸುದ್ದಿ, ಡಂಬಳ: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಗ್ರಾಮೀಣ ರಸ್ತೆ ಅಭಿವೃದ್ಧಿ, ಶಿಕ್ಷಣ, ಮೂಲಸೌಕರ್ಯ ಸುಧಾರಣೆ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ರೋಣ ಕ್ಷೇತ್ರಾದ್ಯಂತ ಯಶಸ್ವಿಯಾಗಿ ಜಾರಿಗೆ ತಂದಿದ್ದಾರೆ ಎಂದು ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಡಂಬಳ ಹೋಬಳಿಯ ಜಂತ್ಲಿ ಶಿರೂರ ಗ್ರಾಮದಲ್ಲಿ 2024-25ನೇ ಸಾಲಿನ ಮಳೆ ಪರಿಹಾರ ಯೋಜನೆಯಡಿ ಶಿರೂರ ಗ್ರಾಮದಲ್ಲಿ ಸಿ.ಸಿ. ರಸ್ತೆ ನಿರ್ಮಾಣ, ಶಿರೂರ ಗ್ರಾಮದ ಎಸ್.ಸಿ. ಕಾಲೋನಿಯಲ್ಲಿ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಯ ಭೂಮಿಪೂಜೆ, ಪೇಠಾಲೂರ ಗ್ರಾಮದಲ್ಲಿ ಹಾಲಪ್ಪ ಕರಿಗಾರ ಮನೆಯಿಂದ ಸೋಮಣ್ಯ ಕರಳ್ಳಿ ಅವರ ಮನೆಯವರೆಗೆ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಯ ಭೂಮಿಪೂಜೆ, 16 ಲಕ್ಷ ವೆಚ್ಚದಲ್ಲಿ ನವೀಕೃತಗೊಂಡ ಪೇಠಾಲೂರ ಸರ್ಕಾರಿ ಹಿರಿಯ ಮಾದರಿ ಕೇಂದ್ರ ಶಾಲೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ಗ್ರಾಮದ ವಿದ್ಯಾರ್ಥಿಗಳ ಉತ್ತಮ ಸಾಧನೆಗೆ ಸೂಕ್ತ ವಾತಾವರಣ ನಿರ್ಮಾಣಕ್ಕಾಗಿ ಸರ್ಕಾರಿ ಶಾಲೆಗಳ ನವೀಕರಣ, ಸ್ಮಾರ್ಟ್ ತರಗತಿ ಕೊಠಡಿಗಳ ಸ್ಥಾಪನೆ, ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವದರ ಮೂಲಕ ಶಿಕ್ಷಣದ ಗುಣಮಟ್ಟ ಹೆಚ್ಚಿಸಲಾಗುತ್ತಿದೆ ಎಂದರು.
ಈಗಾಗಲೇ ಕಂದಾಯ ಇಲಾಖೆಯಲ್ಲಿ ಹಲವು ದಶಕಗಳಿಂದ ಇತ್ಯರ್ಥವಾಗದೇ ಬಾಕಿ ಉಳಿದಿದ್ದ ದರಕಾಸ್ತು ಪೋಡಿ, ಪೌತಿ ಖಾತೆ ಸಮಸ್ಯೆಗಳ ಪರಿಹಾರಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡು ರೈತರು, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗಿದೆ. ಸಾವಿರಾರು ರೈತರು ದರಕಾಸ್ತು ಪೋಡಿ ವಿಶೇಷ ಅಭಿಯಾನದಡಿ ತಮ್ಮ ಸಾಗುವಳಿ ಜಮೀನಿಗೆ ನೈಜ ವಾರಸುದಾರರಾಗಿ ಅಧಿಕೃತ ಹಕ್ಕು ದಾಖಲೆ ಪತ್ರಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಹಲವು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಕಂದಾಯ ಇಲಾಖೆಯಲ್ಲಿನ ಹಲವು ಸಮಸ್ಯೆಗಳಿಗೆ ಮುಕ್ತಿ ಕಾಣಿಸಿ ಜನರಿಗೆ ನೆಮ್ಮದಿ ನೀಡಲಾಗುತ್ತಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ ಮಾತನಾಡಿ, ಪೇಠಾಲೂರ ಸರ್ಕಾರಿ ಹಿರಿಯ ಮಾದರಿ ಕೇಂದ್ರ ಶಾಲೆಯ ನವೀಕರಣದಿಂದ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ಸಿಗಲಿದೆ. ತಾಲೂಕಿನ ಎಲ್ಲಾ ಶಾಲೆಗಳ ದುರಸ್ತಿ ಮತ್ತು ನೂತನ ಶಾಲಾ ಕೊಠಡಿಗಳ ನಿರ್ಮಾಣ ಸರ್ಕಾರ ಮತ್ತು ಈ ಭಾಗದ ಶಾಸಕರಾದ ಜಿ.ಎಸ್. ಪಾಟೀಲರು ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖಂಡ ವೀರಯ್ಯ ಸೋಮನಕಟ್ಟಿಮಠ, ಇಒ ವಿಶ್ವನಾಥ ಹೊಸಮನಿ, ಮುಂಡರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ. ಮೋರನಾಳ, ಮುಖಂಡರಾದ ಅಬ್ದುಲ ಕಲಕೇರಿ, ಹಾಲಪ್ಪ ಕಬ್ಬೇರಳ್ಳಿ, ಎಸ್‌ಡಿಎಮ್‌ಸಿ ಅಧ್ಯಕ್ಷ ಅಶೋಕ ಕಬ್ಬೇರಳ್ಳಿ, ಯಲ್ಲಪ್ಪ ಕರಮುಡಿ, ಭೀಮರಡ್ಡಿ ಪಾಟೀಲ, ಹೇಮಣ್ಣ ಪೂಜಾರ, ರವಿ ದೊಡ್ಡಮನಿ, ಪುಲಕೇಶಗೌಡ, ಭುವನೇಶ್ವರಿ ಕಲ್ಲಕುಟಿಗರ, ಶರಣಪ್ಪ ಶಿರುಂದ, ಬಸವರಡ್ಡಿ ಬಂಡಿಹಾಳ, ಬಶೀರ ಹಾರೂಗೇರಿ, ಬಸುರಾಜ ಶಿರೋಳ, ಹನಮಂತಪ್ಪ ಹೊಸಮನಿ, ಶಿಕ್ಷಕ ವಿಶ್ವನಾಥ ಪಾಟೀಲ, ಪ್ರಥಮ ದರ್ಜೆ ಗುತ್ತಿಗೆದಾರ ಪಾಲಾಕ್ಷಿಗೌಡ ಪಾಟೀಲ, ಕಂದಾಯ ನಿರೀಕ್ಷಕ ಪ್ರಭು ಬಾಗಲಿ, ಪಿಡಬ್ಲುಡಿ ಅಧಿಕಾರಿ ನಾಗೇಂದ್ರ ಪಟ್ಟಣಶೆಟ್ಟರ, ಪಿಡಿಒಗಳು, ಎಸ್.ಡಿ.ಎಮ್.ಸಿ ಸದಸ್ಯರು, ಗ್ರಾಮಸ್ಥರು ಇದ್ದರು. ಎಮ್.ಎಮ್. ಬಂಡಿ ನಿರೂಪಿಸಿ ವಂದಿಸಿದರು.
ಎಲ್ಲಾ ದಾಖಲೆಗಳನ್ನು ಆನ್‌ಲೈನ್ ಮೂಲಕ ಒಂದೇ ಕಡೆ ಅಥವಾ ಒಂದೇ ಕಚೇರಿಯಲ್ಲಿ ಲಭ್ಯವಾಗುವ ರೀತಿಯಲ್ಲಿ ಹಲವು ಸುಧಾರಣೆಗಳನ್ನು ಇಲಾಖೆ ಈಗಾಗಲೇ ಕೈಗೊಂಡಿದೆ. ಬರುವ ಆಯವ್ಯಯದ ನಂತರ ಜನರು ದೃಢೀಕೃತ ಪಹಣಿ, ಸ್ಕೆಚ್ ಕಾಪಿ, ಇಸಿಎಂಆರ್ ಹಾಗೂ ಆಕಾರ್‌ಬಂದ್ ದಾಖಲೆಗಳನ್ನು ಆನ್‌ಲೈನ್ ಮೂಲಕವೇ ಪಡೆಯುವ ಏಕ ವ್ಯವಸ್ಥೆ ತ್ವರಿತವಾಗಿ ಬರಲಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಭರವಸೆ ನೀಡಿದರು.



