ವಿಜಯಸಾಕ್ಷಿ ಸುದ್ದಿ, ಗದಗ: ಐತಿಹಾಸಿಕ ಲಕ್ಕುಂಡಿಯನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಪಟ್ಟಿಗೆ ಸೇರಿಸಿ ಜಾಗತಿಕ ಮಟ್ಟದಲ್ಲಿ ಗುರುತಿಸುವ ಕಾರ್ಯ ಪರಿಣಾಮಕಾರಿಯಾಗಿ ಮುಂದುವರೆಯಬೇಕು. ಈ ನಿಟ್ಟಿನಲ್ಲಿ ಪೂರಕ ಚಟುವಟಿಕೆಗಳು ನಡೆಯಲಿ ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶನಿವಾರ ನಡೆದ ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲಕ್ಕುಂಡಿಯ ತಿಪ್ಪೆಯಲ್ಲಿಯೂ ಸಹ ಐತಿಹಾಸಿಕ ಶಿಲೆಗಳು ದೊರೆಯುತ್ತವೆ. ಪ್ರತಿಯೊಬ್ಬರ ಮನೆಯಲ್ಲಿ ಒಂದಿಲ್ಲೊಂದು ಐತಿಹಾಸಿಕ ವಸ್ತು ಸಿಗುತ್ತದೆ. ಲಕ್ಕುಂಡಿಯಲ್ಲಿ ಹೊಸ ದೇವಾಸ್ಥಾನ, ಕಟ್ಟಡಗಳನ್ನು ನಿರ್ಮಿಸಿ ಅಭಿವೃದ್ಧಿಪಡಿಸಬೇಕಾಗಿಲ್ಲ. ಈಗಾಗಲೇ ಇರುವ ಐತಿಹಾಸಿಕ ವಸ್ತುಗಳನ್ನೇ ಸರಿಯಾಗಿ ಹೊಂದಿಸಿ, ಸ್ವಚ್ಛಗೊಳಿಸಿ ಇಡುವ ಕಾರ್ಯ ಆಗಬೇಕಿದೆ ಎಂದರು.
ಐತಿಹಾಸಿಕ ವಸ್ತುವಿನ ಬಗ್ಗೆ ಅರಿವಿಲ್ಲದೆ ತಮ್ಮ ಹಿತ್ತಿಲೊಳಗೆ ಹುಗಿದು ಬಿದ್ದಿರುವ ಶಿಲೆಗಳು, ಗೋಡೆಗಳ ಮೇಲಿರುವ ಶಾಸನಗಳು, ನಾಣ್ಯ, ಮನೆಯ ಕೆಳಗಿರುವ ಗುಡಿ ಅಥವಾ ಬಾವಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಅಂದಾಗ ಗ್ರಾಮದ ಮೇಲಿನ ಅಭಿಮಾನದಿಂದ, ತ್ಯಾಗ ಮನೋಭಾವದಿಂದ ಸ್ವಯಂ ಪ್ರೇರಣೆಯಿಂದ ಎಲ್ಲರೂ ಸಹಕಾರ ನೀಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.
ಈ ವಿಶೇಷ ಅಭಿಯಾನ ಎಲ್ಲಾ ತಂಡಗಳು ಗುರಿ ಹೊಂದಿ ಕೆಲಸ ಮಾಡಿ ಕನಿಷ್ಟ ೩೦-೪೦ ಪ್ರಾಚ್ಯಾವಶೇಷ ವಸ್ತುಗಳನ್ನು ಸಂಗ್ರಹ ಮಾಡುವ ಕೆಲಸ ಆಗಬೇಕು. ಸಂಗ್ರಹವಾದ ಎಲ್ಲಾ ಐತಿಹಾಸಿಕ ವಸ್ತುಗಳನ್ನು ಸುರಕ್ಷಿತವಾಗಿ ಒಂದೆಡೆ ಇರಿಸಬೇಕು. ಮುಂದೆ ನಿಯಮಾನುಸಾರವಾಗಿ ಆಯುಕ್ತರು ಕಾರ್ಯಪ್ರವೃತ್ತರಾಗಬೇಕು. ಐತಿಹಾಸಿಕ ಶಿಲೆ, ಶಾಸನ, ನಾಣ್ಯ ನೀಡಿದವರಿಗೆ ಪತ್ರ ನೀಡಲಾಗುತ್ತದೆ. ಪ್ರಾಚ್ಯ ಅವಶೇಷಗಳಲ್ಲಿ ಅತೀ ಸುಂದರವಾದವುಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ವಿತರಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಪ್ರವಾಸೋದ್ಯಮ ನಿರ್ದೇಶಕ ಡಾ. ಕೆ.ವಿ. ರಾಜೇಂದ್ರ ಮಾತನಾಡಿ, ಮನೆ ಮನೆಗೆ ಪಾಲಿಕೆ ತೆಗೆದುಕೊಂಡು ಹೋಗುವ ಮುನ್ನ ಎನ್‌ಸಿಸಿ, ಸ್ತ್ರೀ ಶಕ್ತಿ ಗುಂಪು, ಸ್ವಯಂ ಸೇವಕರಿಗೆ ಐತಿಹಾಸಿಕ ವಸ್ತುಗಳ ಕುರಿತು ಸಂಪೂರ್ಣ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಲಕ್ಕುಂಡಿ ಪ್ರಾಧಿಕಾರದ ರಾಜ್ಯ ಸಲಹಾ ಸಮಿತಿ ಸದಸ್ಯ ಸಿದ್ದು ಪಾಟೀಲ, ಗ್ರಾಮ ಪಂಚಾಯತ್ ಅಧ್ಯಕ್ಷ ಪೂಜಾರ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿ.ಪಂ ಸಿಇಓ ಭರತ್ ಎಸ್, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಶರಣು ಗೋಗೇರಿ, ಎಸಿ ಗಂಗಪ್ಪ, ವೀರಯ್ಯಸ್ವಾಮಿ, ಅದ ಕಟ್ಟಿಮನಿ ಮುಂತಾದವರಿದ್ದರು.