HomeKarnataka NewsHMT ಭೂಮಿ ವಿವಾದ: ಅರಣ್ಯ ಭೂಮಿಯಲ್ಲಿ ರಿಯಲ್ ಎಸ್ಟೇಟ್ ಅಸಾಧ್ಯ – ಕುಮಾರಸ್ವಾಮಿ ಆರೋಪಕ್ಕೆ ಈಶ್ವರ...

HMT ಭೂಮಿ ವಿವಾದ: ಅರಣ್ಯ ಭೂಮಿಯಲ್ಲಿ ರಿಯಲ್ ಎಸ್ಟೇಟ್ ಅಸಾಧ್ಯ – ಕುಮಾರಸ್ವಾಮಿ ಆರೋಪಕ್ಕೆ ಈಶ್ವರ ಖಂಡ್ರೆ ತಿರುಗೇಟು

For Dai;y Updates Join Our whatsapp Group

ಬೀದರ್: ಕೇಂದ್ರ ಸರ್ಕಾರದ ಸ್ವಾಮ್ಯದ ಎಚ್‌ಎಂಟಿ ಸಂಸ್ಥೆಯು ಭೂಪರಿವರ್ತನೆ ಆಗದ ಅರಣ್ಯ ಭೂಮಿಯನ್ನು ಅಕ್ರಮವಾಗಿ ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ಮಾರಾಟ ಮಾಡಿದೆ. ಇದೀಗ ಅರಣ್ಯ ಭೂಮಿ ತೆರವುಗೊಳಿಸುವಂತೆ ಆದೇಶವಾಗಿರುವ ಹಿನ್ನೆಲೆಯಲ್ಲಿ ಅಲ್ಲಿ ಯಾವುದೇ ರೀತಿಯ ರಿಯಲ್ ಎಸ್ಟೇಟ್ ಚಟುವಟಿಕೆಗೆ ಅವಕಾಶವಿಲ್ಲ.

ಹೀಗಿರುವಾಗ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾಡುತ್ತಿರುವ ಆರೋಪಗಳಿಗೆ ಯಾವುದೇ ಅರ್ಥವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ತಿರುಗೇಟು ನೀಡಿದ್ದಾರೆ.

ಅರಣ್ಯ ಇಲಾಖೆ ಎಚ್‌ಎಂಟಿ ಭೂಮಿಯನ್ನು ಅತಿಕ್ರಮಣ ಮಾಡಿದೆ ಹಾಗೂ ರಾಜ್ಯ ಸರ್ಕಾರ ರಿಯಲ್ ಎಸ್ಟೇಟ್ ದಂಧೆಗೆ ಅವಕಾಶ ಕಲ್ಪಿಸಲು ಯತ್ನಿಸುತ್ತಿದೆ ಎಂಬ ಕುಮಾರಸ್ವಾಮಿ ಆರೋಪದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಡಿರುವುದು ಅರಣ್ಯ ಇಲಾಖೆ ಅಲ್ಲ, ಎಚ್‌ಎಂಟಿಯೇ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕ ಅರಣ್ಯ ಕಾಯ್ದೆ–1963ರ ಸೆಕ್ಷನ್ 64(ಎ) ಅಡಿಯಲ್ಲಿ ಭೂಮಿಯನ್ನು ಅರಣ್ಯ ಎಂದು ಘೋಷಿಸಿ ತೆರವುಗೊಳಿಸಿದ ಬಳಿಕ ಅಲ್ಲಿ ರಿಯಲ್ ಎಸ್ಟೇಟ್ ಅಭಿವೃದ್ಧಿ ನಡೆಸಲು ಯಾವುದೇ ಅವಕಾಶವಿಲ್ಲ. ಆದ್ದರಿಂದ ಈ ವಿಷಯದಲ್ಲಿ ಮಾಡಲಾಗುತ್ತಿರುವ ಆರೋಪಗಳು ಆಧಾರರಹಿತವಾಗಿವೆ ಎಂದು ಹೇಳಿದರು.

ಕೆಲವು ಅಧಿಕಾರಿಗಳು ಮುಖ್ಯ ಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ಸಮಿತಿ, ಅರಣ್ಯ ಸಚಿವರು ಅಥವಾ ಸಚಿವ ಸಂಪುಟದ ಅನುಮತಿ ಪಡೆಯದೆ ಎಚ್‌ಎಂಟಿ ವಶದಲ್ಲಿರುವ ಅರಣ್ಯ ಭೂಮಿಯ ಡಿನೋಟಿಫಿಕೇಷನ್‌ಗಾಗಿ ಸುಪ್ರೀಂಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ (ಐಎ) ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತು ಮಾಡಲಾಗಿದ್ದು, ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಜೊತೆಗೆ ಆ ಅರ್ಜಿಯನ್ನು ಹಿಂಪಡೆಯಲು ಸಚಿವ ಸಂಪುಟದ ಅನುಮತಿಯನ್ನೂ ಪಡೆದು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದೆ ಎಂದು ಖಂಡ್ರೆ ತಿಳಿಸಿದರು.

ಅರಣ್ಯ ಸಂರಕ್ಷಣಾ ಕಾಯ್ದೆ–1980 ಜಾರಿಗೆ ಬಂದ ಬಳಿಕ ಭೂಪರಿವರ್ತನೆ ಆಗದ ಯಾವುದೇ ಅರಣ್ಯ ಭೂಮಿ ಅರಣ್ಯವಾಗಿಯೇ ಉಳಿಯಬೇಕು ಎಂದು ಸುಪ್ರೀಂಕೋರ್ಟ್ ಸ್ಪಷ್ಟ ತೀರ್ಪು ನೀಡಿದೆ. ಹೀಗಾಗಿ ಈ ಭೂಮಿಯೂ ಅರಣ್ಯ ಪ್ರದೇಶವಾಗಿಯೇ ಮುಂದುವರಿಯಲಿದೆ ಎಂದು ಅವರು ಹೇಳಿದರು.

ಪ್ರಸ್ತುತ ಎಚ್‌ಎಂಟಿ ವಶದಲ್ಲಿರುವ ಭೂಮಿಯಲ್ಲಿ ಸುಮಾರು 280 ಎಕರೆ ಪ್ರದೇಶ ಅರಣ್ಯ ಸ್ವರೂಪದ ನೆಡುತೋಪಿನಿಂದ ಕೂಡಿದೆ. ಅಲ್ಲಿನ ಪಾಳುಬಿದ್ದ ಕಟ್ಟಡಗಳಲ್ಲಿ ಸಿನಿಮಾ ಹಾಗೂ ಧಾರಾವಾಹಿಗಳ ಚಿತ್ರೀಕರಣ ನಡೆಯುತ್ತಿದ್ದು, ಅರಣ್ಯ ಭೂಮಿಯನ್ನು ಎಚ್‌ಎಂಟಿ ವಾಣಿಜ್ಯ ಉದ್ದೇಶಗಳಿಗೆ ಅಕ್ರಮವಾಗಿ ಬಳಸುತ್ತಿದೆ ಎಂದು ಆರೋಪಿಸಿದರು.

ಇದಲ್ಲದೆ, 165 ಎಕರೆ ಭೂಮಿಯನ್ನು ಕೇವಲ 300 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿದ ಖಂಡ್ರೆ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಲಿ ಎಂದು ಸವಾಲು ಹಾಕಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img