ಬೆಂಗಳೂರು: ವಿಧಾನಸಭೆಯ ಕಲಾಪದಲ್ಲಿ ಎದ್ದ ಹನಿಟ್ರ್ಯಾಪ್ ವಿಚಾರ ರಾಜ್ಯಾದ್ಯಂತ ದೊಡ್ಡ ಸಂಚಲನ ಉಂಟು ಮಾಡಿದೆ. ಇನ್ನೂ ಈ ಕುರಿತು ಗೃಹ ಸಚಿವ ಜಿ. ಪರಮೇಶ್ವರ್ ಅವರಿಗೆ ಸಚಿವ ರಾಜಣ್ಣ ದೂರು ನೀಡಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿರುವ ನೆಲಮಂಗಲದ ಟಿ.ಬೇಗೂರು ಬಳಿಯಿರುವ ಸಿದ್ದಾರ್ಥ ಕಾಲೇಜಿನಲ್ಲಿದ್ದ ಪರಮೇಶ್ವರ್ ಅವರನ್ನು ಭೇಟಿ ಮಾಡಿದ ರಾಜಣ್ಣ ಅವರು, ಲಿಖಿತ ದೂರು ನೀಡಿದರು.
ಹೌದು ಹನಿಟ್ರ್ಯಾಪ್ ಬಗ್ಗೆ ಗುರುವಾರ ದೂರು ನೀಡುವುದಾಗಿ ಹೇಳಿದ್ದ ಸಚಿವ ಕೆ.ಎನ್ ರಾಜಣ್ಣ, ಎರಡು ದಿನ ಮೊದಲೇ, ಅದರಲ್ಲೂ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ಗೃಹ ಸಚಿವರನ್ನು ಭೇಟಿ ಮಾಡಿ ದೂರು ನೀಡಿರುವುದು ರಾಜ್ಯ ರಾಜಕೀಯದಲ್ಲಿ ಭಾರಿ ಕುತೂಹಲ ಹೆಚ್ಚಿಸಿದೆ.
ಇನ್ನೂ ಇಂದು ಹನಿಟ್ರ್ಯಾಪ್ ಪ್ರಕರಣ ಸಂಬಂಧ ಮತ್ತಷ್ಟು ಸ್ಫೋಟಕ ವಿಚಾರಗಳನ್ನು ಸಚಿವ ಕೆಎನ್ ರಾಜಣ್ಣ ಬಹಿರಂಗಪಡಿಸಿದ್ದರು. ಎರಡು ಬಾರಿ ಒಬ್ಬ ಹುಡುಗ ಬಂದಿದ್ದ. ಬ್ಲೂ ಜೀನ್ಸ್ ಹಾಕಿಕೊಂಡಿದ್ದ ಒಬ್ಬಳು ಹುಡುಗಿ 2 ಸಲ ಬಂದಿದ್ದಳು. ಮೊದಲ ಬಾರಿ ಬಂದಾಗ ಯಾರು ಎಂದು ಹೇಳಿರಲಿಲ್ಲ. ‘ಸರ್, ನಿಮ್ಮತ್ರ ಬಹಳ ಪರ್ಸನಲ್ಲಾಗಿ ಗುಟ್ಟಾಗಿ ಮಾತನಾಡಬೇಕು’ ಎಂದಿದ್ದಳು. ಎರಡನೇ ಸಲ ಬಂದಾಗ, ‘ಹೈಕೋರ್ಟ್ ವಕೀಲೆ’ ಎಂದು ಹೇಳಿಕೊಂಡಿದ್ದಳು ಎಂದು ಹೇಳಿದ್ದರು.