ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚೆಗೆ ರಾಜ್ಯದ ವಿವಿಧ ಉನ್ನತ ಹುದ್ದೆಗಳಿಗೆ ಆಯ್ಕೆಯಾಗಿರುವ ಗದಗ ಜಿಲ್ಲೆಯ ಗಣ್ಯರನ್ನು ಗೌರವಿಸುವ ನಿಟ್ಟಿನಲ್ಲಿ ಜಿಲ್ಲಾ ನಾಗರಿಕ ಸಮಿತಿಯಿಂದ ಸೆ. 9ರಂದು ಸನ್ಮಾನ ಸಮಾರಂಭ ಆಯೋಜಿಸಲಾಗಿದೆ ಎಂದು ಮಾಜಿ ಶಾಸಕ ಡಿ.ಆರ್. ಪಾಟೀಲ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಸಮಾರಂಭ ನಡೆಯಲಿದ್ದು, ಪ.ಪೂ. ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯ ಇರಲಿದೆ. ಶಾಸಕ ಡಾ. ಹೆಚ್.ಕೆ. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿರುವ ರೋಣ ಶಾಸಕ ಜಿ.ಎಸ್. ಪಾಟೀಲ ಹಾಗೂ ರಾಜ್ಯ ವಿಧಾನ ಪರಿಷತ್ ಸಭಾಪತಿಯಾಗಿ ಆಯ್ಕೆಯಾಗಿರುವ ಸಲೀಂ ಅಹ್ಮದ್ ಅವರನ್ನು ಸನ್ಮಾನಿಸಲಾಗುವುದು. ಉನ್ನತ ಶಿಕ್ಷಣ ಸಚಿವ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಹಾಗೂ ವಿಧಾನ ಪರಿಷತ್ ಉಪಸಭಾಪತಿಯಾಗಿ ಆಯ್ಕೆಯಾಗಿರುವ ಉಮಾಶ್ರೀ ಅವರನ್ನೂ ಗೌರವಿಸಲಾಗುವುದು ಎಂದು ಹೇಳಿದರು.
ವಿಧಾನಸಭೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಮಂಕಾಳ ವೈದ್ಯ ಹಾಗೂ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್, ಹುಬ್ಬಳ್ಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಿ.ಕೆ. ಆದಪ್ಪಗೌಡ್ರ ಅವರಿಗೂ ಸನ್ಮಾನ ನಡೆಯಲಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಸಂಸದ ಬಸವರಾಜ ಬೊಮ್ಮಾಯಿ, ಶಾಸಕರಾದ ಸಿ.ಸಿ. ಪಾಟೀಲ, ಎನ್.ಹೆಚ್. ಕೋನರಡ್ಡಿ, ಡಾ. ಚಂದ್ರು ಲಮಾಣಿ, ವಿಧಾನ ಪರಿಷತ್ ಸದಸ್ಯರಾದ ಪ್ರೊ. ಎಸ್.ವಿ. ಸಂಕನೂರ, ಎಫ್.ಹೆಚ್. ಜಕ್ಕಪ್ಪನವರ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ, ಕೃಷ್ಣಾ ಪರಾಪೂರ, ಶಕುಂತಲಾ ಅಕ್ಕಿ, ಸುಜಾತಾ ದೊಡ್ಡಮನಿ, ವಾಸಣ್ಣ ಕುರಡಗಿ, ಸಿದ್ದಲಿಂಗೇಶ್ವರ ಪಾಟೀಲ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಸಿದ್ಧಲಿಂಗೇಶ್ವರ ಪಾಟೀಲ, ಸುಜಾತಾ ದೊಡ್ಡಮನಿ, ವಾಸಣ್ಣ ಕುರಡಗಿ, ಕೆ.ಎಚ್. ಪಾಟೀಲ, ರಾಮಕೃಷ್ಣ ದೊಡ್ಡಮನಿ, ಟಿ. ಈಶ್ವರ, ಬಿ.ಬಿ. ಅಸೂಟಿ, ಫಾರೂಕ್ ಹುಬ್ಬಳ್ಳಿ ಹಾಗೂ ವಿವೇಕ ಯಾವಗಲ್ ಉಪಸ್ಥಿತರಿದ್ದರು.
ಒಂದೇ ಜಿಲ್ಲೆಯ ಇಬ್ಬರು ಜನಪ್ರತಿನಿಧಿಗಳು ವಿಧಾನ ಪರಿಷತ್ ಹಾಗೂ ವಿಧಾನಸಭೆಯ ಅಧ್ಯಕ್ಷರಾಗಿರುವುದು ಸಂತಸ ತಂದಿದೆ. ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ಯುವ ದೊಡ್ಡ ಜವಾಬ್ದಾರಿ ಸಲೀಂ ಅಹ್ಮದ್ ಹಾಗೂ ಜಿ.ಎಸ್. ಪಾಟೀಲ ಅವರಿಗೆ ದೊರೆತಿದೆ. ಪಕ್ಷಾತೀತವಾಗಿ ಪ್ರೀತಿ, ವಿಶ್ವಾಸ ಗಳಿಸಿಕೊಂಡು ಇಬ್ಬರೂ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.
— ಬಿ.ಆರ್. ಯಾವಗಲ್, ಮಾಜಿ ಸಚಿವ



