ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಮೃತಪಟ್ಟ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೂ ನಿರಂತರವಾಗಿ ಹಣ ಜಮೆಯಾಗುತ್ತಿರುವುದು ಪರಿಶೀಲನೆ ವೇಳೆ ಪತ್ತೆಯಾಗಿದ್ದು, ಈ ಸಂಬಂಧ ಇದುವರೆಗೆ ₹86 ಲಕ್ಷ ಹಣವನ್ನು ವಸೂಲಿ ಮಾಡಿ ಸರ್ಕಾರಕ್ಕೆ ಹಸ್ತಾಂತರಿಸಲಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಜಾರಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಅವರು, ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 7,085 ಮೃತ ಫಲಾನುಭವಿಗಳ ಖಾತೆಗಳಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮೆಯಾಗುತ್ತಿರುವುದು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದರು.
ಮೃತರ ಖಾತೆಗಳಿಗೆ ಹಣ ಜಮೆ:
ಜಿಲ್ಲೆಯಲ್ಲಿ ಫಲಾನುಭವಿಗಳು ಮೃತಪಟ್ಟಿರುವ ವಿಷಯವನ್ನು ಅವರ ಕುಟುಂಬದ ಸದಸ್ಯರು ಸಂಬಂಧಪಟ್ಟ ಇಲಾಖೆಗೆ ತಿಳಿಸದಿರುವ ಹಲವು ಪ್ರಕರಣಗಳು ಪತ್ತೆಯಾಗಿವೆ. ಬಳಿಕ ಗ್ಯಾರಂಟಿ ಯೋಜನೆಗಳ ಜಾರಿ ಸಮಿತಿ ಹಾಗೂ ಅಧಿಕಾರಿಗಳು ಫಲಾನುಭವಿಗಳ ದಾಖಲೆಗಳನ್ನು ಪರಿಶೀಲಿಸಿದಾಗ ಮೃತರ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗುತ್ತಿರುವುದು ಬೆಳಕಿಗೆ ಬಂದಿದೆ.
ಮೃತರ ಖಾತೆಗಳಿಂದ ಹಣ ಡ್ರಾ ಮಾಡಿರುವ ಹಾಗೂ ಹಣ ಡ್ರಾ ಮಾಡದೇ ಉಳಿದಿರುವ ಪ್ರಕರಣಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಇದುವರೆಗೆ ₹86 ಲಕ್ಷ ಹಣವನ್ನು ರಿಕವರಿ ಮಾಡಲಾಗಿದ್ದು, ಸರ್ಕಾರಕ್ಕೆ ಒಪ್ಪಿಸಲಾಗಿದೆ ಎಂದು ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.
ಈ ವಿಚಾರವನ್ನು ಮುಖ್ಯಮಂತ್ರಿ ಅವರ ಗಮನಕ್ಕೂ ತರಲಾಗಿದೆ ಎಂದು ಅವರು ಹೇಳಿದ್ದಾರೆ.
₹2ರಿಂದ ₹3 ಕೋಟಿ ಹಣ ತಪ್ಪು ಖಾತೆಗಳಿಗೆ?
ಪ್ರಾಥಮಿಕ ಪರಿಶೀಲನೆಯ ಆಧಾರದ ಮೇಲೆ ಕೊಪ್ಪಳ ಜಿಲ್ಲೆಯಲ್ಲಿ ಮೃತರ ಖಾತೆಗಳ ಮೂಲಕ ಸುಮಾರು ₹2ರಿಂದ ₹3 ಕೋಟಿ ಹಣ ತಪ್ಪು ಖಾತೆಗಳಿಗೆ ಜಮೆಯಾಗಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಆದರೆ ಸಂಪೂರ್ಣ ಪರಿಶೀಲನೆ ಪೂರ್ಣಗೊಂಡ ಬಳಿಕವಷ್ಟೇ ನಿಖರ ಮೊತ್ತ ತಿಳಿದುಬರಲಿದೆ.
26 ಸಾವಿರ ಮಲ್ಟಿಪಲ್ ಖಾತೆಗಳು ಪತ್ತೆ:
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಖಾತೆಗಳ ಪರಿಶೀಲನೆ ವೇಳೆ ಜಿಲ್ಲೆಯಲ್ಲಿ ಸುಮಾರು 26,000 ಮಲ್ಟಿಪಲ್ ಖಾತೆಗಳು ಪತ್ತೆಯಾಗಿವೆ. ಕೆಲವು ಫಲಾನುಭವಿಗಳ ಬ್ಯಾಂಕ್ ಖಾತೆಗಳು ಹೊರ ರಾಜ್ಯಗಳಲ್ಲಿರುವುದು ಕೂಡ ಅಧಿಕಾರಿಗಳ ಗಮನಕ್ಕೆ ಬಂದಿದೆ.
ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಫಲಾನುಭವಿಯ ಖಾತೆ ಹಾಗೂ ದಾಖಲೆಗಳನ್ನು ಪರಿಶೀಲಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
3.13 ಲಕ್ಷ ಫಲಾನುಭವಿಗಳಿಗೆ ಪ್ರತಿ ತಿಂಗಳು ₹63 ಕೋಟಿ:
ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 3,13,500 ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿದ್ದು, ಪ್ರತಿ ತಿಂಗಳು ಸುಮಾರು ₹63 ಕೋಟಿ ಹಣ ಫಲಾನುಭವಿಗಳ ಖಾತೆಗಳಿಗೆ ಜಮೆಯಾಗುತ್ತಿದೆ.
ಸರ್ಕಾರದ ಸೂಚನೆಯಂತೆ ಇದೀಗ ಪ್ರತಿಯೊಂದು ಫಲಾನುಭವಿಯ ಖಾತೆ, ಮರಣ ದಾಖಲೆಗಳು ಹಾಗೂ ಇತರ ಸಂಬಂಧಿತ ದಾಖಲೆಗಳನ್ನು ತೀವ್ರವಾಗಿ ಪರಿಶೀಲಿಸಲಾಗುತ್ತಿದೆ. ಅಕ್ರಮವಾಗಿ ಹಣ ಪಡೆದಿರುವುದು ದೃಢಪಟ್ಟರೆ ಅಂತಹ ಮೊತ್ತವನ್ನು ವಸೂಲಿ ಮಾಡುವ ಕ್ರಮ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



