ಮೈಸೂರು: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಿದ ಆರೋಪದ ಮೇಲೆ ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ಮೈಸೂರು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಹುಣಸೂರು ತಾಲೂಕಿನ ವಿನೋಬ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಪತಿಯ ಆಹಾರದಲ್ಲಿ ವಿಷಕಾರಿ ದತ್ತೂರಿ ಬೀಜದ ಪುಡಿ ಬೆರೆಸಿ ಕೊಲೆಗೆ ಯತ್ನಿಸಿದ ಬಳಿಕ ಕತ್ತು ಹಿಸುಕಿ ಹತ್ಯೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಮೃತರನ್ನು ಹುಣಸೂರು ತಾಲೂಕಿನ ವಿನೋಬ ಕಾಲೋನಿ ನಿವಾಸಿ ರಾಮಪ್ರಸಾದ್ (35) ಎಂದು ಗುರುತಿಸಲಾಗಿದೆ. ಗಾರೆ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಿಸುತ್ತಿದ್ದ ರಾಮಪ್ರಸಾದ್, ಮೈಸೂರಿನ ಕೆಸರೆಯ ಪವಿತ್ರಾ ಎಂಬಾಕೆಯನ್ನು ವಿವಾಹವಾಗಿದ್ದರು. ದಂಪತಿಗೆ 11 ವರ್ಷದ ಗಂಡು ಮಗು ಹಾಗೂ 9 ವರ್ಷದ ಹೆಣ್ಣು ಮಗು ಇದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಪವಿತ್ರಾ ಅದೇ ಗ್ರಾಮದ ಸುನೀಲ್ ಎಂಬಾತನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಇದೇ ವಿಚಾರವಾಗಿ ರಾಮಪ್ರಸಾದ್ ಹಾಗೂ ಪವಿತ್ರಾ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಪತಿಯನ್ನು ಕೊಲೆ ಮಾಡಲು ಪವಿತ್ರಾ ಮತ್ತು ಸುನೀಲ್ ಸಂಚು ರೂಪಿಸಿದ್ದರು ಎಂಬ ಆರೋಪ ಕೇಳಿಬಂದಿದೆ.
ಅಕ್ಟೋಬರ್ 16ರಂದು ರಾಮಪ್ರಸಾದ್ ಮದ್ಯ ಸೇವಿಸಿ ಮನೆಗೆ ಬಂದಿದ್ದರು. ಈ ವೇಳೆ ಪವಿತ್ರಾ ಇಡ್ಲಿಯಲ್ಲಿ ದತ್ತೂರಿ ಬೀಜದ ಪುಡಿ ಬೆರೆಸಿ ಪತಿಗೆ ತಿನ್ನಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಇದರಿಂದ ರಾಮಪ್ರಸಾದ್ ಮೃತಪಟ್ಟಿರಲಿಲ್ಲ. ಬಳಿಕ ಅವರ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂಬ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಇನ್ನೂ ಆಘಾತಕಾರಿ ಸಂಗತಿಯೆಂದರೆ, ದತ್ತೂರಿ ಬೀಜದ ಕುರಿತು ಯೂಟ್ಯೂಬ್ನಲ್ಲಿ ಮಾಹಿತಿ ಪಡೆದು ಆರೋಪಿಗಳು ಕೃತ್ಯಕ್ಕೆ ಮುಂದಾಗಿದ್ದರು ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ರಾಮಪ್ರಸಾದ್ ಮೃತಪಟ್ಟ ಬಳಿಕ ಪವಿತ್ರಾ, ಅವರ ಸಹೋದರ ಚಂದ್ರಹಾಸನಿಗೆ ಕರೆ ಮಾಡಿದ್ದಳು. ‘ಮೊಸರು ತಿಂದು ಮಲಗಿದ್ದ ರಾಮಪ್ರಸಾದ್ ಎದ್ದೇಳುತ್ತಿಲ್ಲ’ ಎಂದು ತಿಳಿಸಿದ್ದಳು. ವಿಷಯ ತಿಳಿದು ತಕ್ಷಣ ಮನೆಗೆ ಬಂದ ಚಂದ್ರಹಾಸ, ಅಣ್ಣನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಅಷ್ಟರಲ್ಲಾಗಲೇ ರಾಮಪ್ರಸಾದ್ ಮೃತಪಟ್ಟಿದ್ದರು.
ಬಳಿಕ ರಾಮಪ್ರಸಾದ್ ಅವರ ಮೃತದೇಹವನ್ನು ಸ್ವಗ್ರಾಮಕ್ಕೆ ಕೊಂಡೊಯ್ದು ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಆರಂಭದಲ್ಲಿ ಸಹಜ ಸಾವು ಎಂದು ಭಾವಿಸಲಾಗಿದ್ದರೂ, ಕೆಲವು ಅನುಮಾನಾಸ್ಪದ ಸಂಗತಿಗಳು ಕುಟುಂಬಸ್ಥರಲ್ಲಿ ಸಂಶಯ ಮೂಡಿಸಿದ್ದವು.
ರಾಮಪ್ರಸಾದ್ ಮೃತಪಟ್ಟ ದಿನದ ರಾತ್ರಿ ಸುನೀಲ್ ಮನೆಗೆ ಬಂದಿದ್ದ ಎಂಬ ಮಾಹಿತಿ ಸ್ಥಳೀಯರಿಂದ ಲಭ್ಯವಾಗಿತ್ತು ಎನ್ನಲಾಗಿದೆ. ಈ ವಿಚಾರ ತಿಳಿದ ಬಳಿಕ ಅಣ್ಣನ ಸಾವಿನ ಬಗ್ಗೆ ಅನುಮಾನಗೊಂಡ ಚಂದ್ರಹಾಸ, ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರಿನ ಆಧಾರದಲ್ಲಿ ತನಿಖೆ ಆರಂಭಿಸಿದ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಪವಿತ್ರಾ ಮತ್ತು ಸುನೀಲ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ವೇಳೆ ರಾಮಪ್ರಸಾದ್ ಸಾವಿನ ಹಿಂದಿನ ಕೊಲೆ ಆರೋಪಕ್ಕೆ ಸಂಬಂಧಿಸಿದ ಮಹತ್ವದ ಮಾಹಿತಿಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಪವಿತ್ರಾ ಹಾಗೂ ಆಕೆಯ ಪ್ರಿಯಕರ ಸುನೀಲ್ನನ್ನು ಪೊಲೀಸರು ಬಂಧಿಸಿದ್ದಾರೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ಹೆಚ್ಚಿನ ತನಿಖೆ ಮುಂದುವರಿದಿದೆ.









