HomeKarnataka Newsಅಧಿಕಾರದ ಹಿಂದೆ ಹೋಗಿಲ್ಲ, ಆಸ್ತಿ-ಹಣದ ಆಸೆಯೂ ಇಲ್ಲ: ಸಿದ್ದರಾಮಯ್ಯ ನೇರ ನುಡಿ

ಅಧಿಕಾರದ ಹಿಂದೆ ಹೋಗಿಲ್ಲ, ಆಸ್ತಿ-ಹಣದ ಆಸೆಯೂ ಇಲ್ಲ: ಸಿದ್ದರಾಮಯ್ಯ ನೇರ ನುಡಿ

For Dai;y Updates Join Our whatsapp Group

Spread the love

ಬೆಂಗಳೂರು:“ನಾನು ಯಾವತ್ತಿಗೂ ಸಿದ್ಧಾಂತ ಮತ್ತು ಮೌಲ್ಯಗಳಲ್ಲಿ ರಾಜೀ ಮಾಡಿಕೊಂಡಿಲ್ಲ. ಅಧಿಕಾರದ ಹಿಂದೆ ಹೋದವನಲ್ಲ, ಆಸ್ತಿ ಮತ್ತು ಹಣದ ಹಿಂದೆ ಬಿದ್ದವನೂ ಅಲ್ಲ ಎಂದು ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವುಕರಾಗಿ ಹೇಳಿದರು.

ರಾಜ್ಯಪಾಲರ ಅನುಪಸ್ಥಿತಿಯಲ್ಲಿ ರಾಜೀನಾಮೆ ಪತ್ರವನ್ನು ಅವರ ಕಾರ್ಯದರ್ಶಿಗೆ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ತಮ್ಮ ರಾಜಕೀಯ ಪಯಣದ ಹಲವು ನೆನಪುಗಳನ್ನು ಹಂಚಿಕೊಂಡರು.

ನನಗೆ ಎರಡು ಬಾರಿ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕಿದೆ. ಎರಡು ಬಾರಿ ವಿರೋಧ ಪಕ್ಷದ ನಾಯಕನಾಗಿಯೂ ಕೆಲಸ ಮಾಡಿದ್ದೇನೆ. ಈ ಅವಕಾಶಗಳನ್ನು ಕಾಂಗ್ರೆಸ್ ಪಕ್ಷ ನೀಡಿದೆ. ಸೋನಿಯಾ ಗಾಂಧಿ ಅವರು ನನ್ನನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿದರು. ಆಗ ನನ್ನ ಜೊತೆಗೆ ಎಂಟು ಮಂದಿ ಶಾಸಕರು ಕೂಡ ಪಕ್ಷ ಸೇರಿದ್ದರು. ಅವರಲ್ಲಿ ಕೆಲವರು ಈಗ ನಮ್ಮೊಂದಿಗಿಲ್ಲ. ಅವರಿಗೆಲ್ಲ ನಾನು ಚಿರಋಣಿ ಎಂದು ಹೇಳಿದರು.

ನಾನು ಕೊನೆಯ ಉಸಿರಿರುವ ತನಕ ಕೋಮುವಾದಿಗಳ ವಿರುದ್ಧ ಹೋರಾಟ ಮಾಡುತ್ತೇನೆ. ಸಂವಿಧಾನಕ್ಕೆ ಯಾರೇ ಧಕ್ಕೆ ತಂದರೂ ಅದರ ವಿರುದ್ಧ ಹೋರಾಡುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದರು.

ತಮ್ಮ ರಾಜಕೀಯ ಬದುಕಿನ ಬಗ್ಗೆ ಮಾತನಾಡಿದ ಅವರು, “ಹಳ್ಳಿಯಿಂದ ಬಂದ ನಾನು ಶಾಸಕ, ಸಚಿವ, ವಿರೋಧ ಪಕ್ಷದ ನಾಯಕ ಅಥವಾ ಮುಖ್ಯಮಂತ್ರಿ ಆಗುತ್ತೇನೆ ಎಂದು ಯಾವತ್ತೂ ಕನಸು ಕಂಡಿರಲಿಲ್ಲ” ಎಂದು ಹೇಳಿದರು.

2006ರಲ್ಲಿ ಕಾಂಗ್ರೆಸ್‌ಗೆ ಸೇರಿದ ಬಳಿಕ ಕಾರ್ಯಕರ್ತರು, ಮುಖಂಡರು, ಶಾಸಕರು ಮತ್ತು ಸಂಸದರು ನನಗೆ ಅಪಾರ ಪ್ರೀತಿ ತೋರಿಸಿದ್ದಾರೆ. ನನಗೆ ಅವಕಾಶ ಕಲ್ಪಿಸಿದ್ದಾರೆ. ಅವರಿಗೆಲ್ಲ ನಾನು ಕೃತಜ್ಞ ಎಂದು ಹೇಳಿದರು.

ಮುಖ್ಯಮಂತ್ರಿಯಾಗಿ ತಮ್ಮ ಜೊತೆ ಕೆಲಸ ಮಾಡಿದ ಸಹೋದ್ಯೋಗಿಗಳ ಬೆಂಬಲ ಮತ್ತು ಸಹಕಾರವನ್ನು ನೆನೆದು ಭಾವುಕರಾದ ಸಿದ್ದರಾಮಯ್ಯ, ಅವರ ಪ್ರೀತಿ ಮತ್ತು ಸಹಕಾರಕ್ಕೆ ನಾನು ಯಾವಾಗಲೂ ಚಿರಋಣಿ ಆಗಿರುತ್ತೇನೆ ಎಂದರು.

ತಮ್ಮ ರಾಜಕೀಯ ಪ್ರವೇಶದ ಕುರಿತು ಮಾತನಾಡಿದ ಅವರು, ನನ್ನ ರಾಜಕೀಯ ಪ್ರವೇಶ ಆಕಸ್ಮಿಕ. ನನಗೆ ಯಾವುದೇ ರಾಜಕೀಯ ಕುಟುಂಬದ ಹಿನ್ನೆಲೆ ಇರಲಿಲ್ಲ ಎಂದು ಹೇಳಿದರು. ರಾಜಕೀಯಕ್ಕೆ ಬಂದ ದಿನದಿಂದಲೇ ಬುದ್ಧ, ಬಸವಣ್ಣ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಅವರ ತತ್ವ-ಆದರ್ಶಗಳಲ್ಲಿ ನಂಬಿಕೆ ಇಟ್ಟಿದ್ದೇನೆ. ಸಂವಿಧಾನದ ಮೇಲೆ ಅಪಾರ ವಿಶ್ವಾಸವಿದೆ ಎಂದು ಹೇಳಿದರು.

ಕೊನೆಯಲ್ಲಿ ಕುವೆಂಪು ಅವರ ಸಾಲುಗಳನ್ನು ಉಲ್ಲೇಖಿಸಿದ ಸಿದ್ದರಾಮಯ್ಯ, “ಇಡೀ ಸಮಾಜ ಸರ್ವಜನಾಂಗದ ಶಾಂತಿಯ ತೋಟವಾಗಬೇಕು ಎಂಬುದು ನನ್ನ ನಂಬಿಕೆ” ಎಂದು ಕರೆ ನೀಡಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!