ಚೆನ್ನೈ: ನಟ ವಿಜಯ್ ಮುಖ್ಯಮಂತ್ರಿ ಆಗಿರುವುದನ್ನು ನೋಡಿ ತಮಗೆ ಯಾವುದೇ ಅಸೂಯೆ ಇಲ್ಲ ಎಂದು ಸೂಪರ್‌ಸ್ಟಾರ್ ರಜನಿಕಾಂತ್ ಸ್ಪಷ್ಟಪಡಿಸಿದ್ದಾರೆ. ತಮ್ಮ ವಿರುದ್ಧ ಕೇಳಿಬಂದ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ರಾಜಕೀಯದಲ್ಲಿ ಇಲ್ಲ. ಅಂತಹ ಕೀಳು ಮನೋಭಾವದ ವ್ಯಕ್ತಿಯೂ ಅಲ್ಲ ಎಂದು ಖಡಕ್ ಉತ್ತರ ನೀಡಿದ್ದಾರೆ.
ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯ ಬಳಿಕ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರನ್ನು ರಜನಿಕಾಂತ್ ಭೇಟಿಯಾಗಿದ್ದದ್ದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಭೇಟಿಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ರಾಜಕೀಯ ವಲಯದಲ್ಲಿ ಹಲವು ಟೀಕೆಗಳು ಕೇಳಿಬಂದಿದ್ದವು.
ಈ ಹಿನ್ನೆಲೆಯಲ್ಲಿ ಚೆನ್ನೈನ ಪೋಯಸ್ ಗಾರ್ಡನ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಜನಿಕಾಂತ್, ತಮ್ಮ ಭೇಟಿ ಹಾಗೂ ವಿಜಯ್ ಮುಖ್ಯಮಂತ್ರಿ ಆಗಿರುವ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದರು.
ನಾನೇಕೆ ವಿಜಯ್ ಬಗ್ಗೆ ಅಸೂಯೆಪಡಬೇಕು? ನಾನು ರಾಜಕೀಯದಲ್ಲೇ ಇಲ್ಲ. ಬಹುಶಃ ಕಮಲ್ ಹಾಸನ್ ಮುಖ್ಯಮಂತ್ರಿ ಆಗಿದ್ದರೆ ಅಸೂಯೆಯಾಗುತ್ತಿತ್ತೇನೋ,” ಎಂದು ಹಾಸ್ಯಚಟಾಕಿ ಮೂಲಕ ಪ್ರತಿಕ್ರಿಯಿಸಿದರು.
ಟೀಕೆಗಳಿಗೆ ಪ್ರತಿಕ್ರಿಯಿಸದಿದ್ದರೆ ಅವು ಸತ್ಯವೆಂದು ಒಪ್ಪಿಕೊಂಡಂತಾಗುತ್ತದೆ ಎಂದು ಹೇಳಿದ ಅವರು, ಚುನಾವಣಾ ಫಲಿತಾಂಶಗಳ ಬಳಿಕ ಸ್ಟಾಲಿನ್ ಅವರನ್ನು ಸ್ನೇಹಿತನಾಗಿ ಮಾತ್ರ ಭೇಟಿ ಮಾಡಿದ್ದಾಗಿ ತಿಳಿಸಿದರು.
ನಮ್ಮ ಸ್ನೇಹ ರಾಜಕೀಯವನ್ನು ಮೀರಿದೆ. ಅದನ್ನು ರಾಜಕೀಯವಾಗಿ ಅರ್ಥೈಸುವುದು ಸರಿಯಲ್ಲ. ಆದರೆ ನಮ್ಮ ಭೇಟಿಯೇ ಅನಗತ್ಯ ಟೀಕೆಗೆ ಗುರಿಯಾಯಿತು” ಎಂದು ಬೇಸರ ವ್ಯಕ್ತಪಡಿಸಿದರು.
ಕೊಳತ್ತೂರಿನಲ್ಲಿ ಸ್ಟಾಲಿನ್ ಸೋತಿದ್ದಕ್ಕೆ ಬೇಸರವಾಯಿತೇ ಹೊರತು, ವಿಜಯ್ ಮುಖ್ಯಮಂತ್ರಿ ಆಗುವುದನ್ನು ವಿರೋಧಿಸಿದ್ದೇನೆ ಎಂಬ ಅರ್ಥದಲ್ಲಿ ಕೆಲವರು ತಪ್ಪಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಈ ರಜನಿಕಾಂತ್ ಯಾರದ್ದರ ಬಗ್ಗೆಯೂ ಅನಗತ್ಯವಾಗಿ ಮಾತನಾಡುವ ಕೀಳುಮಟ್ಟದ ವ್ಯಕ್ತಿಯಲ್ಲ. ವಿಜಯ್ ಮುಖ್ಯಮಂತ್ರಿ ಆಗಿರುವುದಕ್ಕೆ ನನಗೆ ಯಾವುದೇ ಅಸೂಯೆ ಇಲ್ಲ. ಆದರೆ ಮೊದಲ ಚುನಾವಣೆಯಲ್ಲೇ ಮುಖ್ಯಮಂತ್ರಿ ಆಗಿರುವುದು ಅಚ್ಚರಿಯ ಸಂಗತಿ. ಅವರು ಗೆದ್ದ ಕೂಡಲೇ ನಾನು ಅಭಿನಂದನೆ ಸಲ್ಲಿಸಿದ್ದೇನೆ” ಎಂದು ಸ್ಪಷ್ಟಪಡಿಸಿದರು.

