ಬಳ್ಳಾರಿ/ದುಬೈ: ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿಯಿಂದ ಆತಂಕಗೊಂಡಿರುವ ಕನ್ನಡಿಗರಿಗೆ ಶಾಸಕ ಭರತ್ ರೆಡ್ಡಿ ದುಬೈನಿಂದ ಭರವಸೆ ಸಂದೇಶ ರವಾನಿಸಿದ್ದಾರೆ. ಯುದ್ಧಭೂಮಿಯಲ್ಲಿ ಸಿಲುಕಿದ್ದಾರೆ ಎಂಬ ವದಂತಿಗಳಿಗೆ ತೆರೆ ಎಳೆದ ಅವರು, “ನಾನು ಹಾಗೂ ನನ್ನ ಕುಟುಂಬ ಸಂಪೂರ್ಣ ಸುರಕ್ಷಿತ,” ಎಂದು ಹೇಳಿದ್ದಾರೆ.
ಬಳ್ಳಾರಿಯಿಂದ ದುಬೈಗೆ ಪ್ರವಾಸ ಬಂದಿದ್ದ 35 ಜನರೂ ನಮ್ಮ ಸಂಪರ್ಕದಲ್ಲಿದ್ದಾರೆ. ಅವರಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯ ಕಲ್ಪಿಸಲಾಗಿದೆ. ಸ್ಥಳೀಯ ಸಿಬ್ಬಂದಿಯನ್ನು ಅವರೊಂದಿಗೆ ಸಂಯೋಜನೆಗಾಗಿ ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದರೊಂದಿಗೆ ಕರ್ನಾಟಕ ಸರ್ಕಾರವೂ ಚುರುಕುಗೊಂಡಿದ್ದು, ಬಳ್ಳಾರಿಯ ಪ್ರವಾಸಿಗರ ಪಟ್ಟಿಯನ್ನು ರಾಯಭಾರಿಗೆ ಕಳುಹಿಸಿದೆ. ವಿಮಾನ ನಿಲ್ದಾಣ ಸಾರ್ವಜನಿಕರಿಗೆ ಮುಕ್ತವಾದ ತಕ್ಷಣ ಅವರನ್ನು ರಾಜ್ಯಕ್ಕೆ ಕರೆತರಲು ಕ್ರಮ ಕೈಗೊಳ್ಳಲಾಗುತ್ತದೆ.
ಮಧ್ಯಪ್ರಾಚ್ಯದ ಯುದ್ಧಪೀಡಿತ ದೇಶಗಳಲ್ಲಿ ಸಿಲುಕಿರುವ 109 ಕನ್ನಡಿಗರ ರಕ್ಷಣೆಗೆ ಸಚಿವ ಕೃಷ್ಣಾ ಬೈರೇಗೌಡ ವಿದೇಶಾಂಗ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಸಿಎಂ ಸೂಚನೆಯ ನಂತರ ವಿಪತ್ತು ನಿರ್ವಹಣೆ ವಿಭಾಗ ಕಾರ್ಯಪ್ರವೃತ್ತವಾಗಿದ್ದು, ದೆಹಲಿ ರೆಸಿಡೆಂಟ್ ಕಮೀಷನರ್ ಮುಖಾಂತರ ಸಮನ್ವಯ ನಡೆಯುತ್ತಿದೆ.
ಶನಿವಾರ ರಾತ್ರಿಯಿಂದಲೇ ಸಹಾಯವಾಣಿ ಆರಂಭಿಸಲಾಗಿದೆ. ಇದುವರೆಗೆ 109 ಜನರು ಮಾಹಿತಿ ನೀಡಿದ್ದಾರೆ. ಕದನ ವಿರಾಮವಾಗುವವರೆಗೂ ವಿಮಾನ ಹಾರಾಟ ಸಾಧ್ಯವಿಲ್ಲ. “ಹಾರಾಟ ಮಾಡಿದರೆ ಗಂಡಾಂತರ ಸಂಭವಿಸಬಹುದು,” ಎಂದು ಸಚಿವರು ಎಚ್ಚರಿಸಿದ್ದಾರೆ.
ಕದನ ವಿರಾಮದ ಬಳಿಕ ವಿಶೇಷ ವಿಮಾನ ಕಳುಹಿಸುವ ಸಾಧ್ಯತೆ ಇದೆ. ಸಂಕಷ್ಟದಲ್ಲಿರುವವರು 22253707 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಸರ್ಕಾರ ಮನವಿ ಮಾಡಿದೆ.



