ಬೆಂಗಳೂರು: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಕೆಪಿಎಸ್‌ಸಿ (KPSC) ನೇಮಕಾತಿ ಹಗರಣದ ತನಿಖೆಯಲ್ಲಿ ಮತ್ತಷ್ಟು ಸ್ಫೋಟಕ ವಿಚಾರಗಳು ಬಯಲಾಗಿವೆ. ಅಭ್ಯರ್ಥಿಗಳಿಗೆ ಕೇವಲ ರೆಸಾರ್ಟ್‌ಗಳಲ್ಲಿ ಮಾತ್ರವಲ್ಲದೆ ಲಾಡ್ಜ್‌ಗಳಲ್ಲೂ ತರಬೇತಿ ನೀಡಲಾಗುತ್ತಿತ್ತು ಎಂಬ ವಿಚಾರವನ್ನು ಐಎಎಸ್ ಅಧಿಕಾರಿ ಗ್ಯಾನೇಂದ್ರ ಜಾರಿ ನಿರ್ದೇಶನಾಲಯದ (ED) ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.
ಇಡಿ ಅಧಿಕಾರಿಗಳ ವಿಚಾರಣೆ ವೇಳೆ ಸವಿಸ್ತಾರ ಹೇಳಿಕೆ ನೀಡಿರುವ ಗ್ಯಾನೇಂದ್ರ, “ಪ್ರಶ್ನೆಪತ್ರಿಕೆಗಳನ್ನು ಹಂಚಿಕೆ ಮಾಡುವುದು ಮತ್ತು ಅಭ್ಯರ್ಥಿಗಳಿಗೆ ತರಬೇತಿ ನೀಡುವ ಸಂಪೂರ್ಣ ಜವಾಬ್ದಾರಿ ಕನ್ನಾಳೆ ಬಳಿಯಿತ್ತು. ಪರೀಕ್ಷಾ ಕೇಂದ್ರಗಳ ಬಳಿಯಿದ್ದ ಲಾಡ್ಜ್‌ಗಳಲ್ಲಿ ಅಭ್ಯರ್ಥಿಗಳು ತಂಗಿದ್ದರು, ಕನ್ನಾಳೆ ಅಲ್ಲಿಗೆ ಹೋಗಿ ತರಬೇತಿ ನೀಡುತ್ತಿದ್ದ. ಜನವರಿ 8ರ ಮಧ್ಯಾಹ್ನದಿಂದ ಹಾಗೂ ಜನವರಿ 9ರಂದು ನಡೆದ ಪರೀಕ್ಷೆಗೆ ಆತ ಅತಿ ಹೆಚ್ಚು ಡೀಲ್ ಮಾಡಿದ್ದ” ಎಂದು ಬಹಿರಂಗಪಡಿಸಿದ್ದಾರೆ.
“ಯಾವ ಪರೀಕ್ಷಾ ಕೇಂದ್ರಕ್ಕೆ ಯಾವ ಸೀರೀಸ್ ಪ್ರಶ್ನೆಪತ್ರಿಕೆ ಬರಲಿದೆ ಎಂಬುದನ್ನು ಮಾತ್ರವೇ ನಾನು ಮುಂಚಿತವಾಗಿ ಚರ್ಚಿಸಿದಂತೆ ನಿಗದಿಪಡಿಸಿ ಹೇಳಿದ್ದೆ. ಆತನಿಂದ (ಕನ್ನಾಳೆ) ನಾನು ಇದುವರೆಗೆ ₹1.7 ಕೋಟಿ ರೂಪಾಯಿ ಹಣ ಪಡೆದಿದ್ದೇನೆ ಅಷ್ಟೇ. ಆದರೆ ಪಶುವೈದ್ಯಾಧಿಕಾರಿ ಪರೀಕ್ಷೆಯಲ್ಲಿ ಹಣ ಪಡೆದಿಲ್ಲ, ಅದಕ್ಕೂ ಮುಂಚೆಯೇ ಆತ ಹಣ ನೀಡಿದ್ದ” ಎಂದು ಗ್ಯಾನೇಂದ್ರ ಇಡಿ ಮುಂದೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.



