ಇಂದಿನ ಬಿಡುವಿಲ್ಲದ ಜಗತ್ತಿನಲ್ಲಿ ಮಧುಮೇಹ ಪೀಡಿತರ ಸಂಖ್ಯೆ ಅಧಿಕವಾಗುತ್ತಿದೆ. ಒಮ್ಮೆ ಮಧುಮೇಹ ಬಂದರೆ ಜೀವನ ಪರ್ಯಂತ ಔಷಧಗಳಿಗೆ ದಾಸರಾಗಬೇಕಾಗುತ್ತದೆ. ಅಲ್ಲದೆ, ಆಹಾರಕ್ಕೆ ವಿಶೇಷ ಗಮನ ನೀಡಬೇಕಾಗುತ್ತದೆ. ಮಧುಮೇಹಿಗಳಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಬಹಳ ಮುಖ್ಯ.
ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವ ಔಷಧಿಗಳ ಜೊತೆಗೆ ನಾವು ಸೇವಿಸುವ ಆಹಾರವೂ ಸಹ ಸಹಾಯ ಮಾಡುತ್ತದೆ. ಅವುಗಳಲ್ಲಿ ವಿಶೇಷವಾಗಿ ಸೌತೆಕಾಯಿ ಯನ್ನು ಆರೋಗ್ಯ ತಜ್ಞರು ಸೇವಿಸುವಂತೆ ಸಲಹೆ ನೀಡುತ್ತಾರೆ.
ಸೌತೆಕಾಯಿ ಮಧುಮೇಹಿಗಳಿಗೆ ಎಷ್ಟು ಸಹಕಾರಿ?
* ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಮೂತ್ರ ವಿಸರ್ಜನೆಯ ಸಮಸ್ಯೆಯೂ ಹೆಚ್ಚಾಗಿ ಕಾಡುತ್ತದೆ. ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದರಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತದೆ. ಹೀಗಾಗಿ ಸೌತೆಕಾಯಿಯಲ್ಲಿ ನಿಯಮಿತವಾದ ಸೇವನೆಯೂ ದೇಹದಲ್ಲಿನ ನೀರಿನ ಕೊರತೆಯನ್ನು ನೀಗಿಸುತ್ತದೆ.
* ಸಾಮಾನ್ಯವಾಗಿ ತೂಕ ಹೆಚ್ಚಾಗುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಹೀಗಾಗಿ ಸೌತೆಕಾಯಿಯನ್ನು ಸೇವಿಸುವುದರಿಂದ ಬೊಜ್ಜು ನಿವಾರಣೆಯಾಗಿ ತೂಕವನ್ನು ನಿಯಂತ್ರಿಸುತ್ತದೆ. ಒಂದು ವೇಳೆ ದೇಹದಲ್ಲಿ ಬೊಜ್ಜು ಹೆಚ್ಚಾದರೆ ಸಕ್ಕರೆ ಕಾಯಿಲೆ ಬರುವ ಸಾಧ್ಯತೆಯಿದ್ದು, ಈ ತರಕಾರಿಯೂ ಬೊಜ್ಜಿನ ಅಪಾಯವನ್ನು ಕಡಿಮೆ ಮಾಡುತ್ತದೆ.
* ಸೌತೆಕಾಯಿಯಲ್ಲಿ ಉತ್ಕರ್ಷಣ ನಿರೋಧಕಗಳು ಅಧಿಕವಾಗಿದ್ದು, ಇದರ ನಿಯಮಿತ ಸೇವನೆಯೂ ದೇಹಕ್ಕೆ ಶಕ್ತಿಯನ್ನು ನೀಡುವುದರೊಂದಿಗೆ ದೀರ್ಘಕಾಲದ ಕಾಯಿಲೆಗಳ ಅಪಾಯ ಮಟ್ಟವನ್ನು ಕಡಿಮೆ ಮಾಡುತ್ತದೆ.
* ಸೌತೆಕಾಯಿಯಲ್ಲಿ ಫೈಬರ್ ಪ್ರಮಾಣವು ಅಧಿಕವಾಗಿದ್ದು, ಇದು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಆಹಾರವನ್ನು ಜೀರ್ಣಗೊಳಿಸಿ ಹೊಟ್ಟೆಯ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳುತ್ತದೆ.
* ಮದುಮೇಹಿಗಳಲ್ಲಿ ಕಣ್ಣಿನ ಸಮಸ್ಯೆಯೂ ಹೆಚ್ಚಿರುತ್ತದೆ. ಆದರೆ ಈ ಸೌತೆಕಾಯಿಯಲ್ಲಿ ವಿಟಮಿನ್ ಎ ಸಮೃದ್ಧವಾಗಿದ್ದು, ಇದರ ಸೇವನೆಯು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದ್ದು, ಕಣ್ಣಿನ ದೃಷ್ಟಿ ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.