ಸೋಷಿಯಲ್ ಮೀಡಿಯಾದಲ್ಲಿ ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಕುರಿತು ಪ್ರಚಾರ ಮಾಡಿದ್ದಕ್ಕೆ ಹಲವು ನಟ, ನಟಿಯರಿಗೆ ಇಡಿ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದಾರೆ. ಅಂತೆಯೇ ಇಂದು ತನಿಕೆಗೆ ಹಾಜರಾಗುವಂತೆ ಖ್ಯಾತ ತೆಲುಗು ನಟ ರಾಣಾ ದಗ್ಗುಬಾಟಿ ಅವರಿಗೆ ನೋಟಿಸ್ ನೀಡಲಾಗಿತ್ತು. ಆದ್ರೆ ಇಂದು ವಿಚಾರಣೆಗೆ ರಾಣಾ ಗೈರಾಗಿದ್ದು ಹೊಸ ದಿನಾಂಕಕ್ಕೆ ಮನವಿ ಮಾಡಿದ್ದಾರೆ.
ಪೂರ್ವನಿಗದಿಯಂತೆ ಚಿತ್ರೀಕರಣದಲ್ಲಿ ಭಾಗಿಯಾದ ಕಾರಣಕ್ಕೆ ಇಂದು ವಿಚಾರಣೆಗೆ ರಾಣಾ ಗೈರಾಗಿದ್ದಾರೆ. ಹೀಗಾಗಿ ವಿಚಾರಣೆಗೆ ಹಾಜರಾಗಲು ಹೊಸ ದಿನಾಂಕವನ್ನು ನೀಡುವಂತೆ ಇಡಿ ಅಧಿಕಾರಿಗಳಿಗೆ ನಟ ಮನವಿ ಮಾಡಿಕೊಂಡಿದ್ದಾರೆ.
ಇಡಿ ಸಮನ್ಸ್ ಅನ್ವಯ ರಾಣಾ ದಗ್ಗುಬಾಟಿ ಅವರು ಮುಂಬೈನ ಇಡಿ ಕಚೇರಿಯಲ್ಲಿ ಅಧಿಕಾರಿಗಳ ಮುಂದೆ ಹಾಜರಿರಬೇಕಿತ್ತು. ಆದರೆ, ತಮ್ಮ ವಕೀಲರ ಮೂಲಕ ಇಡಿಗೆ ಮಾಹಿತಿ ನೀಡಿರುವ ರಾಣಾ, “ನಾನು ಪ್ರಸ್ತುತ ನನ್ನ ಚಲನಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೇನೆ. ಇದು ಪೂರ್ವನಿಗದಿತವಾಗಿದ್ದರಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ತನಿಖೆಗೆ ಸಂಪೂರ್ಣ ಸಹಕಾರ ನೀಡಲು ನಾನು ಸಿದ್ಧನಿದ್ದು, ದಯವಿಟ್ಟು ವಿಚಾರಣೆಗೆ ಹಾಜರಾಗಲು ಬೇರೊಂದು ದಿನಾಂಕವನ್ನು ನಿಗದಿಪಡಿಸಬೇಕು,” ಎಂದು ಕೋರಿದ್ದಾರೆ. ರಾಣಾ ಅವರ ಮನವಿಯನ್ನು ಇಡಿ ಅಧಿಕಾರಿಗಳು ಪರಿಗಣಿಸುತ್ತಿದ್ದು, ಶೀಘ್ರದಲ್ಲೇ ಅವರಿಗೆ ಹೊಸದಾಗಿ ಸಮನ್ಸ್ ಜಾರಿ ಮಾಡುವ ಸಾಧ್ಯತೆ ಇದೆ.