ಜಮೀನೊಂದರಲ್ಲಿ ಕಬ್ಬಿಣದ ಅದಿರಿನ ಅಕ್ರಮ ಸಂಗ್ರಹ: ತಹಸೀಲ್ದಾರ ನೇತೃತ್ವದಲ್ಲಿ ದಾಳಿ

0
Spread the love

ಗದಗ: ಗದಗ ಜಿಲ್ಲೆ ಸಾಹಿತ್ಯ, ಸಂಸ್ಕೃತಿ, ಶಿಕ್ಷಣ ಹೀಗೆ ಅನೇಕ ಕ್ಷೇತ್ರಗಳಲ್ಲಿ ಸಂಪದ್ಭರಿತವಾಗಿದೆ. ಪ್ರಾಕೃತಿಕವಾಗಿಯೂ ಬೆಲೆಕಟ್ಟಲಾಗದ ಪಂಚ ಖನಿಜ ಸಂಪತ್ತು ಹೊಂದಿದೆ. ಇಲ್ಲಿನ ಪ್ರಾಕೃತಿಕ ಸಂಪತ್ತಿಗೆ ಬೆಲೆ ಕಟ್ಟಲೂ ಆಗದು. ಇದೇ ಉದ್ದೇಶದಿಂದ ಅಕ್ರಮ ದಂಧೆಕೋರರ ಕಣ್ಣು ಎಂದಿಗೂ ಗದಗ ಜಿಲ್ಲೆಯ ಮೇಲಿದೆ.

Advertisement

ಈ ಹಿಂದೆಯೂ ಗದಗ ತಾಲೂಕಿನ ಹಲವು ಗುಡ್ಡಗಾಡು ಪ್ರದೇಶದಲ್ಲಿ ಅಕ್ರಮ ಕಬ್ಬಿಣದ ಅದಿರು ಬಗೆದು ಮಾರಿ, ಅದೆಷ್ಟೋ ಕುಳಗಳು ಕೋಟ್ಯಾಧೀಶರಾಗಿದ್ದಾರೆ. ಅಂದು ದೊಡ್ಡ ದೊಡ್ಡ ಗಣಿ ಕುಳಗಳು ಜೈಲು ಸೇರಿದ ಬಳಿಕ ಸಣ್ಣಪುಟ್ಟ ದಂಧೆಕರೋರರು ಸುಮ್ಮನಾಗಿದ್ದರು. ಆದರೆ, ಈಗ ಮತ್ತೆ ಸದ್ದಿಲ್ಲದೇ ಚಿಗುರತೊಡಗಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿ, ಕಂದಾಯ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರ ದೂರಿನ ಆಧಾರದಲ್ಲಿ ಅಕ್ರಮ ಕಬ್ಬಿಣದ ಅದಿರು ಸಂಗ್ರಹ ಅಡ್ಡೆ ಮೇಲೆ ದಾಳಿ ಮಾಡಿದ್ದು, ಅಪಾರ ಪ್ರಮಾಣದ ಕಬ್ಬಿಣದ ಅದಿರು ವಶಕ್ಕೆ ಪಡೆದುಕೊಂಡಿದ್ದಾರೆ.

ಗದಗ ತಾಲೂಕಿನ ದುಂದೂರು ಗ್ರಾಮದ ಸಮೀಪದ ಜಮಿನೊಂದರಲ್ಲಿ ಅಕ್ರಮವಾಗಿ ಕಬ್ಬಿಣದ ಅದಿರು ಸಂಗ್ರಹಿಸಲಾಗಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ತಹಸೀಲ್ದಾರ ನೇತೃತ್ವದಲ್ಲಿ ದಾಳಿ ನಡೆಸಿ, ಅಕ್ರಮವಾಗಿ ಸಂಗ್ರಹಿಸಿದ್ದ ಅದಿರು ಸಂಪತ್ತನ್ನು ವಶಕ್ಕೆ ಪಡೆದಿದ್ದಾರೆ.

ರಾತ್ರೋರಾತ್ರಿ ಗುಡ್ಡಗಳನ್ನು ಅಗೆದು, ಹೆದ್ದಾರಿಯ ಪಕ್ಕದಲ್ಲಿಯೇ ಇರುವ ರೈತರ ಜಮೀನುಗಳಲ್ಲಿ ಅಕ್ರಮವಾಗಿ ಅದಿರು ಸಂಗ್ರಹ ಮಾಡುತ್ತಿದ್ದಾರೆ ಎನ್ನಲಾಗಿದೆ.ಇಲ್ಲಿಂದಲೇ ಕಬ್ಬಿಣದ ಅದಿರನ್ನು ಗ್ರೇಡಿಂಗ್ ಮಾಡಿ, ಸಾಗಾಟ ಮಾಡಲು ತಯಾರಿ ನಡೆಸಿದ್ದಾರೆ ಎಂಬ ಕುರಿತು ಗದಗ ಜಿಲ್ಲಾಡಳಿತಕ್ಕೆ ಸ್ಥಳೀಯರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ, ಗದಗ ತಹಸೀಲ್ದಾರ ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ದಾಳಿ ಮಾಡಿ, ಅಪಾರ ಪ್ರಮಾಣದಲ್ಲಿ ಸಂಗ್ರಹಿಸಲಾಗಿದ್ದ ಕಬ್ಬಿಣದ ಅದಿರಿನ ಅಕ್ರಮ ಸಂಗ್ರಹವನ್ನು ವಶಕ್ಕೆ ಪಡೆದಿದ್ದಾರೆ.

ದುಂದೂರಿನ ಸರ್ವೇ ನಂ. 35/1+2ಬಿನಲ್ಲಿ ಸುಮಾರು 201 ಕ್ಯೂಬಿಕ್ ಮೀಟರ್‌ನಷ್ಟು ಅಕ್ರಮ ಕಬ್ಬಿಣದ ಅದಿರು ಸಂಗ್ರಹ ಮಾಡಿರುವುದು ಕಂಡುಬಂದಿದ್ದು, ಎಲ್ಲವನ್ನೂ ವಶಕ್ಕೆ ಪಡೆಯಲಾಗಿದೆ. ಉಮರ ಬಬ್ಲು ಎಂಬ ವ್ಯಕ್ತಿಯೊಬ್ಬರು ಅಕ್ರಮ ಕಬ್ಬಿಣ ಅದಿರು ಸಂಗ್ರಹ ಮಾಡಿದ್ದು ತಿಳಿದು ಬಂದಿದೆ ಎಂದು ತಹಸೀಲ್ದಾರರು ಮಾಹಿತಿ ನೀಡಿದ್ದಾರೆ.ಈ ಜಮೀನಿನಲ್ಲಿ ಸಂಗ್ರಹಿಸಿದ್ದ ಕಬ್ಬಿಣದ ಅದಿರಿನ ಮಾದರಿಯನ್ನು ಪರೀಕ್ಷೆಗಾಗಿ ಲ್ಯಾಬ್‌ಗೆ ಕಳಿಸಲಾಗಿದ್ದು, ಈ ಕುರಿತು ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ ಎನ್ನಲಾಗಿದೆ.

ಕಣ್ಣೆದುರೇ ಇಷ್ಟೆಲ್ಲಾ ನಡೆಯುತ್ತಿದ್ದರೂ ಗಣಿ ಇಲಾಖೆಯ ಅಧಿಕಾರಿಗಳು ಅದ್ಯಾಕೋ ದಂಧೆಕೋರರ ಉಸಾಬರಿಗೆ ಹೋಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಗದಗ ತಾಲೂಕು ಸೇರಿದಂತೆ ಜಿಲ್ಲೆಯ ಹಲವು ಗುಡ್ಡಗಳಲ್ಲಿ ಕಬ್ಬಿಣದ ಅದಿರು ಯಥೇಚ್ಛವಾಗಿದೆ. ಹೀಗಿರುವಾಗ, ಅಲ್ಲಿಂದಲೂ ರಾತ್ರೋರಾತ್ರಿ ಗಣಿಗಾರಿಕೆ ನಡೆಸಿ, ಇಲ್ಲಿ ತಂದು ಸಂಗ್ರಹಿಸಿ ಗ್ರೇಡಿಂಗ್ ಮಾಡುತ್ತಿದ್ದಾರೆ ಎಂಬ ಅನುಮಾನಗಳೂ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ. ಗಣಿ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಹೆಸರು ಹೇಳಲಿಚ್ಚಿಸದ ಗ್ರಾಮಸ್ಥರೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here