ರಾಯಚೂರು: ಬದುಕಿರುವ 70 ವರ್ಷದ ವೃದ್ಧನನ್ನು ದಾಖಲೆಗಳಲ್ಲಿ ಸತ್ತಿದ್ದಾನೆ ಎಂದು ಬಿಂಬಿಸಿ ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿ, ಕೋಟಿ ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಕಬಳಿಸಿರುವ ಆರೋಪ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಕೇಳಿಬಂದಿದೆ.
ತಮ್ಮದೇ ದುಡಿಮೆಯಿಂದ ಸಂಪಾದಿಸಿದ ಆಸ್ತಿಯನ್ನು ಮರಳಿ ಪಡೆಯಲು ಮೊಹಮ್ಮದ್ ಶರ್ಫುದ್ದಿನ್ ಎಂಬ ವೃದ್ಧ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದು, ನ್ಯಾಯಕ್ಕಾಗಿ ಕಣ್ಣೀರು ಹಾಕುವಂತಾಗಿದೆ.
ಶರ್ಫುದ್ದಿನ್ ಅವರು ಮುಂಬೈ ಹಾಗೂ ಬಹ್ರೇನ್‌ನಲ್ಲಿ ಅಧಿಕಾರಿಯಾಗಿ ಸುದೀರ್ಘ ಕಾಲ ಕೆಲಸ ಮಾಡಿದ್ದರು. ಅಲ್ಲಿನ ದುಡಿಮೆಯಿಂದ ಬಂದ ಹಣವನ್ನು ಪತ್ನಿ ರಸೂಲ್ ಬೀ ಅವರಿಗೆ ಕಳುಹಿಸುತ್ತಿದ್ದು, ಮಾನ್ವಿ ಪಟ್ಟಣದಲ್ಲಿ 6 ಮನೆಗಳು ಹಾಗೂ 2 ಅಂಗಡಿಗಳನ್ನು ಖರೀದಿಸಿದ್ದರು ಎನ್ನಲಾಗಿದೆ.
ಪತ್ನಿ ರಸೂಲ್ ಬೀ ನಿಧನರಾದ ಬಳಿಕ, ‘ಕರೀಷ್ಮಾ’ ಎಂಬುವವರು ಜೀವಂತವಾಗಿರುವ ಶರ್ಫುದ್ದಿನ್ ಅವರ ಹೆಸರಿನಲ್ಲಿ ಮಾನ್ವಿ ಪುರಸಭೆಯಿಂದ ನಕಲಿ ಮರಣ ಪ್ರಮಾಣ ಪತ್ರ ಪಡೆದು ಆಸ್ತಿಯನ್ನು ಅಕ್ರಮವಾಗಿ ಕಬಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಮರಣ ಪ್ರಮಾಣ ಪತ್ರದಲ್ಲೇ ಹೆಸರು ವ್ಯತ್ಯಾಸ:
ಶರ್ಫುದ್ದಿನ್ ಅವರ ನೈಜ ದಾಖಲೆಗಳಲ್ಲಿ ‘ಮೊಹಮ್ಮದ್ ಶರ್ಫುದ್ದಿನ್, ತಂದೆ ಖಾಜಾ ಪಿರ್ ಸಾಬ್’ ಎಂದು ನಮೂದಿಸಲಾಗಿದೆ. ಆದರೆ ನಕಲಿ ಎಂದು ಆರೋಪಿಸಲಾಗಿರುವ ಮರಣ ಪ್ರಮಾಣ ಪತ್ರದಲ್ಲಿ ‘ಶರ್ಫುದ್ದಿನ್, ತಂದೆ ಪಿರ್ ಸಾಬ್’ ಎಂದು ದಾಖಲಾಗಿದೆ.
ಈ ಕುರಿತು ತನಿಖೆ ನಡೆಸಿದ ಮಾನ್ವಿ ತಹಶೀಲ್ದಾರ್, ಮರಣ ಪ್ರಮಾಣ ಪತ್ರದಲ್ಲಿರುವ ಹೆಸರಿನ ವ್ಯಕ್ತಿ ಆ ಸ್ಥಳದಲ್ಲಿ ವಾಸವಾಗಿಲ್ಲ ಎಂದು ಪೊಲೀಸರಿಗೆ ವರದಿ ನೀಡಿದ್ದಾರೆ ಎನ್ನಲಾಗಿದೆ.
ಇನ್ನು 2025ರಲ್ಲಿ ಕಂದಾಯ ಇಲಾಖೆ ನೀಡಿರುವ ವರದಿಯಲ್ಲೂ ಶರ್ಫುದ್ದಿನ್ ಅವರು ಜೀವಂತವಾಗಿದ್ದಾರೆ ಎಂಬುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಆದರೂ ಇದುವರೆಗೆ ನ್ಯಾಯ ದೊರೆತಿಲ್ಲ ಎಂಬುದು ವೃದ್ಧನ ಅಳಲು.
ಅಧಿಕಾರಿಗಳ ವಿರುದ್ಧವೂ ಆರೋಪ:
ಮಾನ್ವಿ ಪುರಸಭೆಯ ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಶಾಮೀಲಾಗಿ ಜೀವಂತ ವ್ಯಕ್ತಿಗೆ ಮರಣ ಪ್ರಮಾಣ ಪತ್ರ ನೀಡಿದ್ದಾರೆ. ಈ ಕುರಿತು ಸಮಗ್ರ ತನಿಖೆ ನಡೆಸಿ, ವೃದ್ಧ ಶರ್ಫುದ್ದಿನ್ ಅವರಿಗೆ ತಕ್ಷಣ ನ್ಯಾಯ ಒದಗಿಸಬೇಕು ಎಂದು ಸ್ಥಳೀಯ ಹೋರಾಟಗಾರ ಶಿವರಾಜ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾನ್ವಿ ಪುರಸಭೆ ಆಯುಕ್ತ ಪರಶುರಾಮ್ ದೇವಮಾನೆ, ದಾಖಲೆಗಳಲ್ಲಿ ಪರಸ್ಪರ ವ್ಯತ್ಯಾಸಗಳಿದ್ದು, ಈ ಹಿಂದೆ ನ್ಯಾಯಾಲಯ ಹಾಗೂ ಸರ್ಕಾರಕ್ಕೆ ಸಲ್ಲಿಸಲಾಗಿದ್ದ ಅರ್ಜಿಗಳು ವಜಾಗೊಂಡಿವೆ ಎಂದು ತಿಳಿಸಿದ್ದಾರೆ. ತಹಶೀಲ್ದಾರ್ ವರದಿ ಕುರಿತು ಮಾಹಿತಿ ಇಲ್ಲ. ಅಗತ್ಯವಿದ್ದರೆ ನ್ಯಾಯಾಲಯದ ಮೂಲಕ ಪ್ರಶ್ನಿಸಬಹುದು ಎಂದು ಅವರು ಹೇಳಿದ್ದಾರೆ.
ಜೀವಂತ ವ್ಯಕ್ತಿಗೆ ಮರಣ ಪ್ರಮಾಣ ಪತ್ರ ನೀಡಲಾಗಿದೆ ಎಂಬ ಆರೋಪ ಗಂಭೀರ ಸ್ವರೂಪ ಪಡೆದಿದ್ದು, ಪ್ರಕರಣದ ಸಮಗ್ರ ತನಿಖೆ ನಡೆಸಿ ಸತ್ಯಾಂಶ ಹೊರತರಬೇಕೆಂಬ ಆಗ್ರಹ ಕೇಳಿಬಂದಿದೆ.



