ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಸುಧಾರಿಸಿ: ಜಿಲ್ಲಾಧಿಕಾರಿ ದಿವ್ಯಪ್ರಭು

0
Spread the love

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಧಾರವಾಡ ಜಿಲ್ಲೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಪಡೆಯುವಲ್ಲಿ ಹಿಂದೇಟು ಹಾಕುತ್ತಿದೆ. ಹೀಗಾಗಿ ಮಿಷನ್ ವಿದ್ಯಾಕಾಶಿ ಕಾರ್ಯಕ್ರಮದಡಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರಸಕ್ತ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 100ರಷ್ಟು ಫಲಿತಾಂಶ ಸಾಧಿಸಲು ಶಿಕ್ಷಕರು ಹಾಗೂ ಪಾಲಕರ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿಗಳಾದ ದಿವ್ಯಪ್ರಭು ಜಿ.ಆರ್.ಜೆ. ಹೇಳಿದರು.

Advertisement

ಶುಕ್ರವಾರ ಸದಾಶಿವನಗರದ ಸರ್ಕಾರಿ ಉರ್ದು ಪ್ರೌಢಶಾಲೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು.

ಮಿಷನ್ ವಿದ್ಯಾಕಾಶಿ ಕಾರ್ಯಕ್ರಮದಡಿಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಈ ಪ್ರೌಢಶಾಲೆಯಲ್ಲಿ ಕನ್ನಡ ವಿಷಯದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಅನುತೀರ್ಣರಾಗುತ್ತಿದ್ದಾರೆ. ಹೀಗಾಗಿ ಮಕ್ಕಳಲ್ಲಿ ಕನ್ನಡ ಓದುವ ಹವ್ಯಾಸವನ್ನು ಬೆಳೆಸಬೇಕು. ಕಥೆ, ಲೇಖನ, ದಿನಪತ್ರಿಕೆಗಳನ್ನು ಓದುವುದನ್ನು ರೂಢಿ ಮಾಡಿಸಬೇಕು. ಕಿರು ಪರೀಕ್ಷೆಗಳಲ್ಲಿ ಕನ್ನಡ ವಿಷಯದಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಚಾಕಲೇಟ್ ನೀಡಿ ಪ್ರೋತ್ಸಾಹಿಬೇಕಾಗುತ್ತದೆ. ಇದರಿಂದ ಬೇರೆ ವಿದ್ಯಾರ್ಥಿಗಳು ಸಹ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳಿಸುವರು. ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕಿದೆ ಎಂದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಗುರಿಯನ್ನು ಸಾಧಿಸಲು ಮಕ್ಕಳಲ್ಲಿ ಓದಿನ ಬಗ್ಗೆ ಆಸಕ್ತಿ ಮೂಡಿಸಬೇಕಿದೆ. ಪರೀಕ್ಷೆಗೆ ಇನ್ನೂ ಎರಡೂ ತಿಂಗಳು ಇರುವುದರಿಂದ, ಶಿಕ್ಷಕರು ಮಕ್ಕಳಿಗೆ ಕನ್ನಡ ವಿಷಯದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಿ ಅಧ್ಯಯನ ನಡೆಸುವಂತೆ ಮಾಡಬೇಕಿದೆ. ಭಾಷೆಯನ್ನು ಆಸಕ್ತಿಯಿಂದ ಕಲಿಯಬಹುದು. ಶಿಕ್ಷಕರು ಮಕ್ಕಳಿಗೆ ಓದುವ ಹವ್ಯಾಸ ಬೆಳೆಸಲು ಮನಸ್ಸು ಮಾಡಬೇಕು. ಮಕ್ಕಳಲ್ಲಿ ಸಕಾರಾತ್ಮಕ ಚಿಂತನೆಗಳು ಮೂಡುವಂತೆ ಮಾಡಬೇಕಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ಕುರಿತು ಪಾಲಕರ ಸಭೆ ನಡೆಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ಮಾಡುವ ನಿಟ್ಟಿನಲ್ಲಿ ಮಿಷನ್ ವಿದ್ಯಾಕಾಶಿ ಕಾರ್ಯಕ್ರಮದ ಮೂಲಕ ಹಲವು ಕಾರ್ಯಕಮಗಳನ್ನು ಹಾಕಿಕೊಳ್ಳಲಾಗಿದೆ. ಭಾಷೆ ಕಲಿಯುವ ಶಕ್ತಿಯನ್ನು ಮಕ್ಕಳು ಹೊಂದಿರುತ್ತಾರೆ. ಅವರಿಗೆ ಕನ್ನಡ ಭಾಷೆಯಲ್ಲಿ ಓದುವ, ವ್ಯವಹಾರ ನಡೆಸುವ ರೀತಿಯಲ್ಲಿ ಬೋಧನೆ ಮಾಡಬೇಕಿದೆ. ಒಟ್ಟಿನಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಆಸ್ಫಕ್ ಹಿರೇಕುಂಬಿ ಶಾಲೆಯಲ್ಲಿರುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು, ಬೋಧನೆ, ವಿದ್ಯಾಕಾಶಿ ಕಾರ್ಯಕ್ರಮಗಳ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಪ್ಪಗೌಡ್ರ, ಎಸ್‌ಡಿಎಂಸಿ ಸದಸ್ಯರಾದ ಸಲೀಂ ಹೆಬ್ಬಳ್ಳಿ, ಅಂಜುಂ ಕತ್ತಿಬ್, ಶ್ರೀನ ಜರತಾರಘರ, ಮಹ್ಮದ್ ಶರೀಫ್ ಮೊರಬ, ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.

ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಮಾತನಾಡಿ, ಮಕ್ಕಳು ಪುಸ್ತಕ ಓದುವುದರ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು. ಕ್ರೀಡೆಗಳಲ್ಲಿ ಸಹ ಉತ್ತಮ ಸಾಧನೆ ಮಾಡಬಹುದಾಗಿದೆ. ಪಾಲಕರು ಮಕ್ಕಳ ಮೇಲೆ ಹೆಚ್ಚಿನ ಹೊರೆ ಹಾಕಬಾರದು. ಉತ್ತಮ ಫಲಿತಾಂಶ ಸಾಧಿಸಲು ಶಿಕ್ಷಕರ ಜೊತೆ ಪಾಲಕರು ಕೈ ಜೋಡಿಸಬೇಕು ಎಂದರು.


Spread the love

LEAVE A REPLY

Please enter your comment!
Please enter your name here