ಹುಬ್ಬಳ್ಳಿ: ನಗರದಲ್ಲಿ ಗಣಪತಿ ಮೂರ್ತಿ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಪರಿಚಿತ ಕಿಡಿಗೇಡಿಗಳು ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದೆ.
ಸೆಪ್ಟೆಂಬರ್ 12ರಂದು ರಾತ್ರಿ 9:30ರ ಸುಮಾರಿಗೆ ಮರಾಠ ಗಲ್ಲಿಯಿಂದ ಸಿಬಿಟಿ ಕಡೆಗೆ ತೆರಳುವ ರಸ್ತೆಯ ಬಳಿ ಮೇದಾರ್ ಓಣಿ ಹಾಗೂ ಕಲಾಲ್ ಓಣಿಯ ಗಣಪತಿ ಮೆರವಣಿಗೆಗಳು ಮುಖಾಮುಖಿಯಾಗಿದ್ದವು.
ಈ ವೇಳೆ ಕಲಾಲ್ ಓಣಿಯ ಗಣಪತಿ ಮೆರವಣಿಗೆಯ ಡಿಜೆ ಮುಂದೆ ಕೆಲ ಯುವಕರು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದರು ಎನ್ನಲಾಗಿದೆ. ತಕ್ಷಣ ಪೊಲೀಸರು ಮಧ್ಯಪ್ರವೇಶಿಸಿ, ಕನಿಷ್ಠ ಬಲಪ್ರಯೋಗದ ಮೂಲಕ 30 ಸೆಕೆಂಡ್‌ಗಳಿಗಿಂತ ಕಡಿಮೆ ಅವಧಿಯಲ್ಲಿ ಅವರನ್ನು ಅಲ್ಲಿಂದ ಚದುರಿಸಿದ್ದಾರೆ ಎಂದು ಪೊಲೀಸ್ ಕಮಿಷನರ್ ಭೂಷಣ ಬೋರಸೆ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಅಪರಿಚಿತ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ಕಮಿಷನರ್ ತಮ್ಮ ಅಧಿಕೃತ ವಾಟ್ಸ್‌ಆಪ್ ಖಾತೆಯ ಮೂಲಕ ಮಾಹಿತಿ ನೀಡಿದ್ದಾರೆ.

